ಜೈರಾಮ್ ರಮೇಶ್
–ಪಿಟಿಐ ಚಿತ್ರ
ನವದೆಹಲಿ: ‘ಕಳೆದ ವರ್ಷ ಮೋದಿ ಅವರು ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾಗ ಜಾತಿ ಜನಗಣತಿಯ ಬಗ್ಗೆ ಮಾತನಾಡುವವರನ್ನು ‘ನಗರ ನಕ್ಸಲರು’ (ಅರ್ಬನ್ ನಕ್ಸಲ್) ಎಂದು ಕರೆದಿದ್ದರು. ಆದರೆ, ಇದೀಗ ಮೋದಿ ಮತ್ತು ಅಮಿತ್ ಶಾ ಅವರು ಯಾವಾಗಿನಿಂದ ನಗರ ನಕ್ಸಲ್ ಆದರು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ, ಗಡುವು ಇಲ್ಲದೆ ಸುದ್ದಿ ನೀಡುವಲ್ಲಿ ಪ್ರಧಾನಿ ಮೋದಿ ನಿಪುಣರು’ ಎಂದು ಕಾಲೆಳೆದಿದೆ.
ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವ ಕೇಂದ್ರ ಸರ್ಕಾರದ ‘ಹಠಾತ್’ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಆದರೂ ಜನಗಣತಿಯನ್ನು ಸಾಧ್ಯವಾದಷ್ಟು ಬೇಗ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.
‘ಸಾಂವಿಧಾನಿಕ ತಿದ್ದುಪಡಿ ತರುವ ಮೂಲಕ ಮೀಸಲಾತಿ ಮೇಲಿನ ಶೇಕಡ 50ರ ಮಿತಿಯನ್ನು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಇದು ನಡೆದಾಗ ಮಾತ್ರ ಜಾತಿಗಣತಿ ಅರ್ಥಪೂರ್ಣವಾಗುತ್ತದೆ’ ಎಂದು ರಮೇಶ್ ತಿಳಿಸಿದ್ದಾರೆ.
‘2019ರಲ್ಲಿ ₹8,254 ಕೋಟಿ ವೆಚ್ಚದಲ್ಲಿ ಜನಗಣತಿಯನ್ನು ನಡೆಸುವ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಅನುಮೋದಿಸಿತ್ತು. ಆದರೆ, ಜಾತಿ ಗಣತಿ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿರಲಿಲ್ಲ. ಇದೀಗ ಆರು ವರ್ಷಗಳ ಬಳಿಕ ಆಶ್ಚರ್ಯಕರ ರೀತಿ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ನಿರ್ಧರಿಸಿರುವುದಾಗಿ ಸರ್ಕಾರ ಘೋಷಣೆ ಮಾಡಿದೆ’ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.
‘2025-26ನೇ ಸಾಲಿನ ಬಜೆಟ್‌ನಲ್ಲಿ ಜನಗಣತಿ ಆಯುಕ್ತರ ಕಚೇರಿಗೆ ಕೇವಲ ₹575 ಕೋಟಿ ಮಾತ್ರ ಹಂಚಿಕೆ ಮಾಡಲಾಗಿದೆ. ಹಾಗಾದರೆ ₹575 ಕೋಟಿ ವೆಚ್ಚದಲ್ಲಿ ಯಾವ ರೀತಿಯ ಜನಗಣತಿಯನ್ನು ಮಾಡಲು ಯೋಜಿಸುತ್ತಿದ್ದಾರೆ. ನಿಮ್ಮ ಉದ್ದೇಶವೇನು?, ಜಾತಿ ಗಣತಿ ಬಗ್ಗೆ ಕೇವಲ ಶೀರ್ಷಿಕೆ ನೀಡುವುದೊಂದೇ ನಿಮ್ಮ ಉದ್ದೇಶವೇ’ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.