ADVERTISEMENT

2026ರಲ್ಲಿ ಗಗನಯಾನದೊಂದಿಗೆ, ಸಮುದ್ರಯಾನಕ್ಕೂ ಸಿದ್ಧತೆ: ಸಚಿವ ಜಿತೇಂದ್ರ ಸಿಂಗ್

ಪಿಟಿಐ
Published 26 ಡಿಸೆಂಬರ್ 2024, 15:57 IST
Last Updated 26 ಡಿಸೆಂಬರ್ 2024, 15:57 IST
<div class="paragraphs"><p>ಜಿತೇಂದ್ರ ಸಿಂಗ್</p></div>

ಜಿತೇಂದ್ರ ಸಿಂಗ್

   

ಪಿಟಿಐ ಚಿತ್ರ

ಹೈದರಾಬಾದ್: 2026ರಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಹೊತ್ತಿಗೆ, ಸಾಗರದಾಳಕ್ಕೂ ಯಾನಿಗಳನ್ನು ಕಳುಹಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.

ADVERTISEMENT

ಹಿಂದೂ ಮಹಾಸಾಗರದಲ್ಲಿ 2004ರಲ್ಲಿ ಉಂಟಾಗಿದ್ದ ಸುನಾಮಿಯ ಕರಾಳ ದಿನದ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರದಲ್ಲಿ (INCOIS) ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘2024ರ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರಯಾನ ವಿಷಯವನ್ನು ಪ್ರಸ್ತಾಪಿಸಿದ್ದರು’ ಎಂದರು.

‘ಗಗನಯಾನ ಮತ್ತು ಸಮುದ್ರಯಾನಕ್ಕೆ ಮನುಷ್ಯರನ್ನು ಕಳುಹಿಸುವ ಕಾರ್ಯ ಏಕಕಾಲಕ್ಕೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರವಿಚಂದ್ರನ್ ಅವರ ಬಳಿ ಚರ್ಚಿಸಿದ್ದೆ. ಭಾರತೀಯ ಆಗಸ ಎತ್ತರದಲ್ಲೂ, ಸಮುದ್ರದಾಳದಲ್ಲೂ ಇರಲಿದ್ದಾರೆ. ದೇಶದ ಇತಿಹಾಸದಲ್ಲಿ ಇದು ಮತ್ತೊಂದು ಸಾಧನೆಯಾಗಿ ದಾಖಲಾಗಲಿದೆ. ಆ ಮೂಲಕ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಸಾಗರದಾಳದ ಅಧ್ಯಯನದಲ್ಲಿ ದೇಶದ ದಾಪುಗಾಲಿಡಲಿದೆ’ ಎಂದಿದ್ದಾರೆ.

ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಯೋಜನೆ ಈ ಮೊದಲು 2025ಕ್ಕೆ ನಿಗದಿಯಾಗಿತ್ತು. ಇದೀಗ ಈ ಯೋಜನೆ 2026ಕ್ಕೆ ನಿಗದಿಯಾಗಿದೆ. 

‘ಭಾರತವು ಒಟ್ಟು 7,500 ಕಿ.ಮೀ. ಅಷ್ಟು ಕರಾವಳಿ ಪ್ರದೇಶವನ್ನು ಹೊಂದಿದೆ. ಸಾಕಷ್ಟು ಸಾಗರೋತ್ಪನ್ನ ಹೊಂದಿದ್ದು, ಇದರ ಸುಸ್ಥಿರ ಅನ್ವೇಷಣೆಗೆ ಒತ್ತು ನೀಡಲಾಗುವುದು. ಜತೆಗೆ ಈ ಕ್ಷೇತ್ರಕ್ಕಾಗಿ ಸೂಕ್ತ ಪರಿಸರ ಸೃಷ್ಟಿಸಲಾಗುವುದು’ ಎಂದು ಜಿತೇಂದ್ರ ಹೇಳಿದ್ದಾರೆ.

ಸಮುದ್ರಯಾನ ಯೋಜನೆಯಡಿ 6 ಸಾವಿರ ಕಿಲೋ ಮೀಟರ್‌ ಸಾಗರದಾಳಕ್ಕೆ ಮನುಷ್ಯರನ್ನು ಕರೆದೊಯ್ಯುವ ಯೋಜನೆಯನ್ನು ಭೂವಿಜ್ಞಾನ ಸಚಿವಾಲಯವು 2023ರಲ್ಲಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.