ADVERTISEMENT

ವಿಮಾನ ದುರಂತ: ಮೃತ CM ರೂಪಾನಿ ಅಂತ್ಯಸಂಸ್ಕಾರದ ಖರ್ಚು ಪಾವತಿಸದ BJP; ಸಂಘರ್ಷ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:36 IST
Last Updated 17 ಸೆಪ್ಟೆಂಬರ್ 2025, 6:36 IST
<div class="paragraphs"><p>ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಅಮಿತ್ ಶಾ</p></div>

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಅಮಿತ್ ಶಾ

   

ಪಿಟಿಐ ಚಿತ್ರ

ಅಹಮದಾಬಾದ್: ಕಳೆದ ಜೂನ್ 12ರಂದು ಗುಜರಾತ್‌ನ ಅಹಮದಾಬಾದ್ ನಗರದ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ಅಂತ್ಯಸಂಸ್ಕಾರಕ್ಕೆ ಆದ ಖರ್ಚನ್ನು ಭರಿಸಲು ಬಿಜೆಪಿ ರಾಜ್ಯ ಘಟಕ ನಿರಾಕರಿಸಿದ್ದು ರಾಜಕೀಯ ವಾಕ್‌ಸಮರಕ್ಕೆ ಕಾರಣವಾಗಿದೆ.

ADVERTISEMENT

ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ ದೊಡ್ಡ ಸವಾಲಾಗಿತ್ತು. ಡಿಎನ್‌ಎ ಪರೀಕ್ಷೆ ನಂತರ ವಿಜಯ ರೂಪಾನಿ ಅವರ ಮೃತದೇಹ ನಾಲ್ಕು ದಿನಗಳ ನಂತರ ಪತ್ತೆಯಾಯಿತು. ಬಿಜೆಪಿ ರಾಜ್ಯ ಘಟಕವು ರಾಜ್‌ಕೋಟ್‌ನಲ್ಲಿ ಅದ್ಧೂರಿ ಅಂತ್ಯಸಂಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು. 

ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹಿತ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕಾಗಿ ₹25 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ ಇದನ್ನು ಪಕ್ಷ ನಿಧಿಯಿಂದ ನೀಡುವ ಬದಲು, ಕುಟುಂಬಕ್ಕೆ ಕಳುಹಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಲು ವಿಜಯ್ ಅವರ ಪತ್ನಿ ಅಂಜನಿ ರೂಪಾನಿ ನಿರಾಕರಿಸಿದರು. ರಾಜ್ಯದ ಬಿಜೆಪಿ ಘಟಕದ ವಕ್ತಾರರೂ ಪ್ರತಿಕ್ರಿಯೆಯಿಂದ ದೂರವೇ ಉಳಿದರು. 

ಕಳೆದ ವಾರ ರಾಜ್‌ಕೋಟ್‌ಗೆ ಭೇಟಿ ನೀಡಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಅವರಿಗೂ ಇದೇ ಪ್ರಶ್ನೆ ಎದುರಾಗಿದೆ.

ಪಕ್ಷದ ರಾಜ್ಯ ಘಟಕದಲ್ಲಿರುವ ಎರಡು ಬಣಗಳ ನಡುವಿನ ತಿಕ್ಕಾಟವೇ ಇದಕ್ಕೆ ಕಾರಣ ಎಂದೆನ್ನಲಾಗಿದೆ. ಇದರಲ್ಲಿ ಒಂದು ಗುಂಪು ರೂಪಾನಿ ಅವರನ್ನು ಮೂಲೆಗುಂಪು ಮಾಡಿತ್ತು. 2021ರಲ್ಲಿ ಹಠಾತ್ತನೆ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲೂ ಇದೇ ಗುಂಪು ಕೆಲಸ ಮಾಡಿತ್ತು. ಇವರೊಂದಿಗೆ ಸಂಪುಟದ ಹೊರಗಿರುವವರೂ ಸೇರಿದ್ದರು ಎಂದು ಆಂತರಿಕ ಮೂಲಗಳು ಹೇಳಿವೆ.

ಮೊದಲ ಬಾರಿ ಶಾಸಕರಾಗಿದ್ದ ಭೂಪೇಂದ್ರ ಪಾಟೀಲ್ ಅವರ ನಂತರದಲ್ಲಿ ರೂಪಾನಿ ಅವರು 2016ರಿಂದ 2021ರವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.

ಆದರೆ 2022ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಕ್ಷದ ಹೈಕಮಾಂಡ್‌ ರೂಪಾನಿಗೆ ಸೂಚಿಸಿತ್ತು ಎಂಬ ವರದಿಯೂ ಇದೆ. ಇದೇ ಅವಧಿಯಲ್ಲಿ ಅವರನ್ನು ಪಂಜಾಬ್‌ನ ಉಸ್ತುವಾರಿಯಾಗಿ ಹಾಗೂ ನಂತರದಲ್ಲಿ ಮಹಾರಾಷ್ಟ್ರದ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಗುಜರಾತ್ ಘಟಕದ ವಕ್ತಾರ ಮನೀಶ್ ದೋಷಿ, ‘ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಇಂದ್ರ ಚಂದ್ರ ಎಂದು ಹೊಗಳುವ ಬಿಜೆಪಿ ನಾಯಕರು, ಅವರಿಂದ ಕೆಲಸವಾದ ತಕ್ಷಣ ಕಸದಬುಟ್ಟಿಗೆ ಎಸೆಯುತ್ತಾರೆ. ಪಕ್ಷಕ್ಕಾಗಿ ತನ್ನ ಜೀವಿತಾವಧಿಯನ್ನೇ ಮುಡಿಪಾಗಿಟ್ಟ ಒಬ್ಬ ವ್ಯಕ್ತಿ, ನಿಧನರಾಗುತ್ತಿದ್ದಂತೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದು ರಾಜ್ಯಕ್ಕೆ ಆದ ಅವಮಾನ’ ಎಂದಿದ್ದಾರೆ.

ಏರ್‌ ಇಂಡಿಯಾ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ 260ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.