
ಮುಂಬೈ: ‘ಭಾರತದ ಸಂವಿಧಾನವು ಎಲ್ಲ ಸಮುದಾಯಗಳ ಜನರಿಗೆ ಸಮಾನ ಸ್ಥಾನಮಾನವನ್ನು ನೀಡಿದ್ದು, ಮುಂದೊಂದು ದಿನ ಹಿಜಾಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಮಂತ್ರಿ ಆಗುತ್ತಾರೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಪ್ರತಿಪಾದಿಸಿದರು.
‘ಇದನ್ನು ನೋಡಲು ನಾನು ಜೀವಂತವಾಗಿ ಇರದಿರಬಹುದು. ಆದರೆ ಭವಿಷ್ಯದಲ್ಲಿ ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ಬಂದೇ ಬರುತ್ತದೆ ’ ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂಗವಾಗಿ ಸೋಲಾಪುರದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಭಾರತದ ಸಂವಿಧಾನವು ಎಲ್ಲಾ ಸಮುದಾಯಗಳಿಗೆ ಸಮಾನ ಸ್ಥಾನಮಾನ ನೀಡಿದೆ. ಆದರೆ, ಪಾಕಿಸ್ತಾನದ ಸಂವಿಧಾನ, ಆ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಒಂದೇ ಸಮುದಾಯದ ಸದಸ್ಯರಿಗಷ್ಟೇ ನಿರ್ಬಂಧಿಸಿದೆ’ ಎಂದು ಹೇಳಿದರು.
ಒವೈಸಿ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಅನಿಲ್ ಬೋಂಡೆ, ‘ಒವೈಸಿ ಬೇಜವಾದ್ದಾರಿತನದ ಹೇಳಿಕೆ ನೀಡಿದ್ದಾರೆ. ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೊಂದು ಬಲವಂತದ ಹೇರಿಕೆ. ಆದ್ದರಿಂದ ಮುಸ್ಲಿಂ ಮಹಿಳೆಯರೂ ಹಿಜಾಬ್ ಅನ್ನು ವಿರೋಧಿಸುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.