ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ
Credit: PTI, X/@GauravGogoiAsm
ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಕಳುಹಿಸಿಕೊಡಲು ಉದ್ದೇಶಿಸಿರುವ ಕಾಂಗ್ರೆಸ್ ನಿಯೋಗದಿಂದ ಅಸ್ಸಾಂ ಸಂಸದ ಗೌರವ್ ಗೊಗೊಯಿ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
‘ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮೇ 16ರಂದು ನಿಯೋಗಕ್ಕೆ ನಾಲ್ಕು ಸಂಸದರ ಹೆಸರು ಶಿಫಾರಸು ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಿದ್ದರು. ಅದರಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್ ಮತ್ತು ರಾಜ್ ಬ್ರಾರ್ ಅವರ ಹೆಸರುಗಳನ್ನು ಶಿಫಾರಸು ಮಾಡಿ ಶುಕ್ರವಾರ ಸಂಜೆಯೇ ಪಟ್ಟಿ ಕಳುಹಿಸಲಾಗಿದೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ನಿಯೋಗದ ನಾಲ್ವರು ಸಂಸದರ ಪೈಕಿ ಒಬ್ಬರಾದ ಗೌರವ್ ಗೊಗೊಯಿ ಅವರನ್ನು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೈಬಿಡಬೇಕು. ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೊಲ್ಬರ್ನ್ ಅವರು ಪಾಕಿಸ್ತಾನದ ಸೇನೆಯೊಂದಿಗೆ ಉತ್ತಮ ನಂಟು ಹೊಂದಿದ್ದಾರೆ ಎಂದು ಶರ್ಮಾ ಆರೋಪಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿ ಮತ್ತು ಪಕ್ಷಪಾತದ ರಾಜಕೀಯವನ್ನು ಮೀರಿ ನಿರ್ಧಾರ ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುತ್ತೇನೆ ಎಂದು ಶರ್ಮಾ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.