ADVERTISEMENT

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2025, 11:56 IST
Last Updated 26 ಅಕ್ಟೋಬರ್ 2025, 11:56 IST
<div class="paragraphs"><p>ಸಂತ್ರಸ್ತರೊಂದಿಗೆ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ</p></div>

ಸಂತ್ರಸ್ತರೊಂದಿಗೆ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ

   

ಬೆಂಗಳೂರು: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಬಸ್‌ಗೆ ಕರ್ನೂಲ್ ಬಳಿ ಕಳೆದ ಶುಕ್ರವಾರ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರ ಸಜೀವ ದಹನವಾಗಿದ್ದರ ಬಗ್ಗೆ ಹೈದರಾಬಾದ್ ಪೊಲೀಸ್ ಕಮಿಷನರ್ (CoP), ಕರ್ನಾಟಕದ ಹುಬ್ಬಳ್ಳಿ ಮೂಲದ ವಿ.ಸಿ. ಸಜ್ಜನರ ಅವರು ತೀವ್ರ ಮರುಕ ವ್ಯಕ್ತಪಡಿಸಿದ್ದಾರೆ.

ದುರಂತ ನಡೆಯಲು ಕಾರಣ ಎನ್ನಲಾದ ಮದ್ಯಪಾನ ಮಾಡಿದ್ದ ಬೈಕ್ ಸವಾರನ ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಅವರು, ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಿದ್ದಂತೆ ಎಂದು ತೀವ್ರ ಕಿಡಿಕಾರಿದ್ದಾರೆ.

ADVERTISEMENT

ಕರ್ನೂಲ್ ಬಸ್ ದುರಂತ ಒಂದು ಅಪಘಾತವಲ್ಲ. ಇದು ಬೈಕ್ ಚಾಲಕನ ಬೇಜವಾಬ್ದಾರಿತನದ ವರ್ತನೆ. ಅವನಿಂದಲೇ 20 ಅಮಾಯಕರು ಪ್ರಾಣ ಕಳೆದುಕೊಂಡಿರುವುದು ತಿಳಿದು ಬಂದಿದೆ. ಇಂತವರನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನೂಲ್ ಬಸ್ ದುರಂತ ಶುಕ್ರವಾರ ಬೆಳಿಗಿನ ಜಾವ 2.40ರ ಸುಮಾರು ಚಿನ್ನ ಟೇಕೂರ್ ಬಳಿ ನಡೆದಿತ್ತು. ಇದಕ್ಕೂ ಮುನ್ನ ಅದೇ ಹೆದ್ದಾರಿ ಬಳಿ ಮದ್ಯಪಾನ ಮಾಡಿ ಯುವಕರಿಬ್ಬರು ಬೈಕ್ ಚಲಾಯಿಸಿಕೊಂಡು ಬಂದಿದ್ದರು. ಬೈಕ್ ಚಾಲಕ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ. ಅದೇ ಬೈಕ್‌ಗೆ ಬಸ್ ಡಿಕ್ಕಿಯಾಗಿ ಬಸ್‌ಗೆ ಬೆಂಕಿ ಹೊತ್ತಿ ಉರಿದಿತ್ತು.

ನಾನು ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿದ್ದೇನೆ. ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಿದ್ದಂತೆ. ಅವರು ಅಮಾಯಕರ ಜೀವನ, ಭವಿಷ್ಯ, ಅವರ ಕುಟುಂಬವನ್ನೂ ಹಾಳು ಮಾಡುತ್ತಾರೆ ಎಂದಿದ್ದಾರೆ ಸಜ್ಜನರ್.

ಹೈದರಾಬಾದ್‌ನಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಯಾರೇ ಆದರೂ ಅಂತವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸುವುದು ಖಂಡಿತ. ನಮ್ಮ ಇಲಾಖೆ ಅವರ ಬಗ್ಗೆ ಯಾವುದೇ ದಯೆ ಹೊಂದುವುದರಿಲ್ಲ ಎಂದು ಎಚ್ಚರಿಸಿದ್ದಾರೆ.

ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಕರ್ನಾಟಕದ ಹುಬ್ಬಳ್ಳಿ ಮೂಲದ ವಿ.ಸಿ. ಸಜ್ಜನರ ಅವರು ಇತ್ತೀಚೆಗೆ ಹೈದರಾಬಾದ್ ಪೊಲೀಸ್ ಕಮಿಷನರ್ ಆಗಿ ನೇಮಕವಾಗಿದ್ದರು.

ಬೈಕ್ ಸವಾರ ಕುಡಿದಿದ್ದು ದೃಢ

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್‌ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್‌ ಸವಾರ ಮದ್ಯದ ಅಮಲಿನಲ್ಲಿದ್ದನು ಎಂದು ವಿಧಿ ವಿಜ್ಞಾನ ವರದಿ ಬಹಿರಂಗಪಡಿಸಿವೆ.

ಮೃತಪಟ್ಟ ಬೈಕ್‌ ಸವಾರನ ಸಹಚರ ಯೆರ್ರಿಸ್ವಾಮಿ, ಹಿಂಬದಿ ಸವಾರನಾಗಿದ್ದು, ಇಬ್ಬರೂ ಮದ್ಯ ಸೇವಿಸಿದ್ದಾಗಿ ಕರ್ನೂಲ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.