ಪ್ರಾತಿನಿಧಿಕ ಚಿತ್ರ
ಹೈದರಾಬಾದ್: ಇಲ್ಲಿನ ವಿಶ್ವವಿದ್ಯಾಲಯದ ಭೂ ವಿವಾದ ಪ್ರಕರಣ ಸಂಬಂಧ ಪ್ರತಿಭಟನೆಗಳು ಜೋರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡಿದೆ.
ತೆಲಂಗಾಣದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಮೀನಾಕ್ಷಿ ನಟರಾಜನ್ ಅವರು ಶನಿವಾರ ರಾಜ್ಯಕ್ಕೆ ಬಂದಿದ್ದಾರೆ. ಅವರು, ವಿವಿ ಪಕ್ಕದ 400 ಎಕರೆ ಜಾಗಕ್ಕೆ ಸಂಬಂಧಿಸಿದ ಎಲ್ಲ ಪಾಲುದಾರರೊಂದಿಗೆ ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ಹೇಳಿದ್ದಾರೆ.
ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ, ಸಾಮಾಜಿಕ ಸಂಘಟನೆಗಳು ಹಾಗೂ ಇತರರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ರಚಿಸಲಾಗಿರುವ ಮಂತ್ರಿಗಳ ಸಮಿತಿಯಲ್ಲಿರುವ ಉಪ ಮಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಕೈಗಾರಿಕಾ ಸಚಿವ ಡಾ. ಶ್ರೀಧರ್ ಬಾಬು, ವಿವಿಯ ಹಳೇ ವಿದ್ಯಾರ್ಥಿಯೂ ಆಗಿರುವ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು, ಮೀನಾಕ್ಷಿ ಅವರನ್ನು ಭೇಟಿಯಾಗಿದ್ದಾರೆ.
'ಸರ್ಕಾರವು ವಿವಿಯ ವಿದ್ಯಾರ್ಥಿಗಳು ಹಾಗೂ ಇತರರ ಆಕ್ಷೇಪಗಳನ್ನೂ ಆಲಿಸಬೇಕು ಎಂದು ಅವರು (ಮೀನಾಕ್ಷಿ ನಟರಾಜನ್) ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಬರುವವರೆಗೆ ಕಾಯುವಂತೆಯೂ ಸಲಹೆ ನೀಡಿದ್ದಾರೆ. ಭೂಮಿಗೆ ಸಂಬಂಧಿಸಿದ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ. ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸುತ್ತೇವೆ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೀನಾಕ್ಷಿ ಅವರು ಕೆಲವು ಸಾಮಾಜಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿ ಸಂಘಟನೆಗಳು ಮತ್ತು ನೌಕರರು, ಮೀನಾಕ್ಷಿ ಅವರನ್ನು ಭಾನುವಾರ ಭೇಟಿಯಾಗಲಿದ್ದಾರೆ ಎಂದು ವಿವಿಯ ಮೂಲಗಳು ತಿಳಿಸಿವೆ.
ಹೈದರಾಬಾದ್ ವಿವಿ ಪಕ್ಕದ ಕಾಂಚಾ ಗಚ್ಚಿಬೌಲಿಯಲ್ಲಿರುವ 400 ಎಕರೆ ಪ್ರದೇಶದಲ್ಲಿ ಐಟಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಆದರೆ, ಇದರ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.
ಈ ಜಾಗವು ವಿವಿಗೆ ಸೇರಿದ್ದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಆದರೆ, ಜಾಗ ತನ್ನ ವಶದಲ್ಲಿದೆ ಎಂದು ಸರ್ಕಾರದ ಪ್ರತಿಪಾದಿಸುತ್ತಿದೆ. ಈ ಪ್ರಕರಣವು ಸದ್ಯ, ತೆಲಂಗಾಣ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಕಾಂಚಾ ಗಚ್ಚಿಬೌಲಿಯಲ್ಲಿನ ಈ ಪ್ರದೇಶಕ್ಕೆ ಏಪ್ರಿಲ್ 16ರ ವರೆಗೆ ಯಾರೂ ಹೋಗದಂತೆ ಸೈಬರಾಬಾದ್ ಪೊಲೀಸರು ಏಪ್ರಿಲ್ 4ರಂದು ನಿರ್ಬಂಧ ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.