ADVERTISEMENT

ಆರ್‌ಎಸ್‌ಎಸ್‌ ಭಾರತಕ್ಕೆ ಸಮಾನವೆಂದು ಪರಿಗಣಿಸಿದ ಇಮ್ರಾನ್ ಖಾನ್: ಸಂಘ

ವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣಕ್ಕೆ ಪ್ರತಿಕ್ರಿಯೆ

ಪಿಟಿಐ
Published 28 ಸೆಪ್ಟೆಂಬರ್ 2019, 10:43 IST
Last Updated 28 ಸೆಪ್ಟೆಂಬರ್ 2019, 10:43 IST
   

ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಭಯೋತ್ಪಾದನೆಯನ್ನು ವಿರೋಧಿಸುತ್ತಿರುವುದರಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅದನ್ನು ಭಾರತಕ್ಕೆ ಸಮಾನಾರ್ಥಕವಾಗಿ ಪರಿಗಣಿಸಿದ್ದಾರೆ ಎಂದು ಸಂಘ ಹೇಳಿದೆ.

ವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣದಲ್ಲಿ ಆರ್‌ಎಸ್‌ಎಸ್ ಬಗ್ಗೆ ಇಮ್ರಾನ್ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರು, ‘ಆರ್‌ಎಸ್‌ಎಸ್ ಹೆಸರು ಹೇಳುವುದನ್ನು ಪಾಕಿಸ್ತಾನದ ಪ್ರಧಾನಿ ಇಲ್ಲಿಗೇ ನಿಲ್ಲಿಸದಿರಲಿ’ ಎಂದು ಹೇಳಿದರು.

‘ಆರ್‌ಎಸ್‌ಎಸ್ ಭಾರತದಲ್ಲಿ ಮಾತ್ರ ಇದೆ. ವಿಶ್ವದ ಇತರೆಡೆ ಎಲ್ಲಿಯೂ ಶಾಖೆಗಳಿಲ್ಲ. ಪಾಕಿಸ್ತಾನಕ್ಕೆ ಯಾಕೆ ನಮ್ಮ ಮೇಲೆ ಕೋಪ? ಅದಕ್ಕೆ ಸಂಘದ ಮೇಲೆ ಕೋಪ ಇದೆ ಎಂದಾದರೆ ಭಾರತದ ಮೇಲೆ ಕ್ರೋಧವಿದೆ ಎಂದೇ ಅರ್ಥ. ಆರ್‌ಎಸ್‌ಎಸ್ ಮತ್ತು ಭಾರತ ಈಗ ಸಮಾನಾರ್ಥಕವಾಗಿವೆ’ ಎಂದುಕೃಷ್ಣ ಗೋಪಾಲ್ ಹೇಳಿದರು.

‘ಭಾರತ ಮತ್ತು ಆರ್‌ಎಸ್ಎಸ್ ಅನ್ನು ಜಗತ್ತು ಒಂದೇ ಆಗಿ ನೋಡಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಇಮ್ರಾನ್ ಸಾಹೇಬರು ಅದನ್ನು ಚೆನ್ನಾಗಿಯೇ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ನಾವು ಅಭಿನಂದಿಸುತ್ತೇವೆ. ಅವರು ನಮ್ಮ ಹೆಸರನ್ನು ಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಯಾರು ಭಯೋತ್ಪಾದನೆಯ ಸಂತ್ರಸ್ತರಾಗಿದ್ದಾರೋ, ಯಾರು ಅದನ್ನು ವಿರೋಧಿಸುತ್ತಾರೋ ಅವರಿಗೆ ಈಗ ಆರ್‌ಎಸ್‌ಎಸ್ ಕೂಡ ಭಯೋತ್ಪಾದನೆಯ ವಿರುದ್ಧವಿದೆ ಎಂಬುದರ ಅರಿವಾಗತೊಡಗಿದೆ ಎಂದೂ ಅವರು ಹೇಳಿದರು. ಈ ಕಾರಣಕ್ಕಾಗಿಯೇ ಇಮ್ರಾನ್ ಖಾನ್ ಆರ್‌ಎಸ್‌ಎಸ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ ಎಂದೂ ಅವರು ಪ್ರತಿಪಾದಿಸಿದರು.

ವಿಶ್ವಸಂಸ್ಥೆಯ ಮಹಾಧಿವೇಶನದ ಶುಕ್ರವಾರ ಮಾಡಿದ ಭಾಷಣದಲ್ಲಿ ಇಮ್ರಾನ್ ಖಾನ್, ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದರು.ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿಯೇ ಟೀಕಿಸಿದ್ದಲ್ಲದೆ, ಮೋದಿ ಅವರು ಆರ್‌ಎಸ್‌ಎಸ್‌ನ ಆಜೀವ ಸದಸ್ಯ. ಈ ಸಂಘಟನೆಯು ಮುಸ್ಲಿಂ ಸಮುದಾಯವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.