ಕೆಂಪು ಕೋಟೆಯಲ್ಲಿ ಭಿಗಿ ಭದ್ರತೆ
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆಯು ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುತ್ತಲಿನ ಎತ್ತರದ ಕಟ್ಟಡಗಳ ಮೇಲೆ ಸ್ನೈಪರ್ ಹಿಡಿದ ಯೋಧರು ಹದ್ದಿನ ಕಣ್ಣಿಟ್ಟಿದ್ದಾರೆ. ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಇಡೀ ನಗರದ ಮೇಲೆ ಕಣ್ಗಾವಲು ಇಡಲಾಗಿದೆ.
ಕೆಂಪು ಕೋಟೆ ಸುತ್ತ 11 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇವರೊಂದಿಗೆ ಮೂರು ಸಾವಿರ ಸಂಚಾರ ಪೊಲೀಸರೂ ವಾಹನ ದಟ್ಟಣೆ ನಿಯಂತ್ರಿಸಲು ಹಾಗೂ ಅನುಮಾನಾಸ್ಪದ ಸಂಚಾರಗಳ ಮೇಲೆ ನಿಗಾ ಇಡಲಿದ್ದಾರೆ.
ಕೆಂಪು ಕೋಟೆಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೆ ಭಿಗಿ ಭದ್ರತೆ ನೀಡಲು ದೆಹಲಿ ಪೊಲೀಸರು, ಸೇನೆ ಮತ್ತು ಅರೆ ಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಹಲವು ಹಂತಗಳ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ರಾತ್ರಿ 10ರಿಂದ ರಾಷ್ಟ್ರ ರಾಜಧಾನಿಯೊಳಗೆ ಯಾವುದೇ ವಾಣಿಜ್ಯ ವಾಹನ ಪ್ರವೇಶಿಸುವಂತಿಲ್ಲ ಎಂದು ಸಂಚಾರ ಪೊಲೀಸರು ಕಟ್ಟುನಿಟ್ಟನ ಆದೇಶ ಮಾಡಿದ್ದಾರೆ. ಪ್ರತಿ ರೈಲ್ವೆ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು, ವಿಮಾನ ನಿಲ್ದಾಣ, ಮೆಟ್ರೊ ನಿಲ್ದಾಣಗಳಲ್ಲಿ ದಿನದ 24 ಗಂಟೆ ಭದ್ರತೆ ಒದಗಿಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಹಾಗೂ ಬ್ಯಾಗುಗಳ ತಪಾಸಣೆ ಮತ್ತು ಗುರುತಿನ ಚೀಟಿ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಶುದ್ಧೀಕರಣ ಘಟಕಗಳಿಗೂ ವಿಶೇಷ ಭದ್ರತೆ ಒದಗಿಸಲಾಗಿದೆ. ಯಮುನಾ ನದಿಯಲ್ಲಿ ವೇಗದ ಬೋಟ್‌ಗಳಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಡ್ರೋನ್‌ಗಳ ಮೇಲೆ ಕಣ್ಣಿಡಲು ಡಿಸಿಪಿ ರ‍್ಯಾಂಕ್‌ನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೆಂಪು ಕೋಟೆ ಮೇಲೆ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಅಡಚಣೆಯಾಗದಂತೆ ಸುತ್ತಮುತ್ತ ಇರಬಹುದಾದ ಹಕ್ಕಿಗಳಿಗೆ ಆಹಾರ ಸಿಗುವ ತಾಣಗಳನ್ನು ಪಾಲಿಕೆ ಸಹಾಯದಿಂದ ಶುಚಿಗೊಳಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಬಿ.ಕೆ. ಸಿಂಗ್ ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾ, ಡ್ರೋನ್ ಕಣ್ಗಾವಲು, ಮುಖ ಚಹರೆ ಪತ್ತೆ ಕ್ಯಾಮೆರಾಗಳು ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ಪತ್ತೆ ಮಾಡುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐದು ಪಾರ್ಕಿಂಗ್ ತಾಣಗಳಲ್ಲಿ ವಾಹನ ನಿಗಾ ವವಸ್ಥೆಯನ್ನು (UVSS) ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ. ಇದರ ಮೂಲಕ ವಾಹನಗಳಲ್ಲಿ ಇಟ್ಟಿರಬಹುದಾದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಹ್ವಾನ ಪತ್ರಿಕೆ ಇರುವವರಿಗೆ ಮಾತ್ರ ಆ. 15ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿದೆ. ಜನರ ನಡುವೆ ಏನಾದರೂ ಅನುಮಾನಾಸ್ಪದ ಘಟನೆಗಳು ನಡೆಯುತ್ತಿದ್ದರೆ ಅದನ್ನು ಪತ್ತೆ ಮಾಡಲು ಹೆಡ್‌ಕೌಂಟ್ ಕ್ಯಾಮೆರಾಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇವೆಲ್ಲವುಗಳ ನಡುವೆ ಸಮಾಜಿಕ ಮಾಧ್ಯಮಗಳ ಮೇಲೂ ತೀವ್ರ ನಿಗಾ ಇಡಲಾಗಿದೆ. ಯಾವುದೇ ರೀತಿಯ ಆನ್‌ಲೈನ್ ಬೆದರಿಕೆಗಳು, ಸುಳ್ಳು ಮಾಹಿತಿ ಹರಡಿ ಶಾಂತಿ ಭಂಗ ಉಂಟುಮಾಡುವವರ ಮೇಲೆ ಸೈಬರ್ ಪೊಲೀಸರು ನಿಗಾ ವಹಿಸಲಿದ್ದಾರೆ.
ಇವುಗಳೊಂದಿಗೆ ಸಮಾಜ ಘಾತುಕ ಶಕ್ತಿಗಳು ಅಥವಾ ಭಯೋತ್ಪಾದಕರ ಯಾವುದೇ ಕೃತ್ಯಗಳನ್ನು ತಡೆಯಲು ಪ್ಯಾರಾಗ್ಲೈಡರ್, ಹ್ಯಾಂಗ್ ಗ್ಲೈಡರ್, ಮಾನವ ರಹಿತ ವಿಮಾನ, ಡ್ರೋನ್, ಬಿಸಿ ಗಾಳಿ ಬಲೂನುಗಳು ಆ. 16ರವರೆಗೂ ದೆಹಲಿಯ ಮೇಲೆ ನಿಗಾ ಇಡಲಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.