ADVERTISEMENT

Operation Sindoor | ಪಾಕ್‌ಗೆ ಚೀನಾ ನೆರವು ಮರೆತರೇ ಮೋದಿ: ಕಾಂಗ್ರೆಸ್ ಪ್ರಶ್ನೆ

ಪಿಟಿಐ
Published 29 ಆಗಸ್ಟ್ 2025, 7:55 IST
Last Updated 29 ಆಗಸ್ಟ್ 2025, 7:55 IST
<div class="paragraphs"><p>ನರೇಂದ್ರ ಮೋದಿ, ಜೈರಾಮ್‌ ರಮೇಶ್</p></div>

ನರೇಂದ್ರ ಮೋದಿ, ಜೈರಾಮ್‌ ರಮೇಶ್

   

ನವದೆಹಲಿ: ‘ಭಾರತ ಮತ್ತು ಅಮೆರಿಕ ನಡುವಿನ ಸುಂಕ ಸಮರವನ್ನೇ ಲಾಭವನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿರುವ ಚೀನಾದೊಂದಿಗೆ ಸಂಬಂಧ ಉತ್ತಪಡಿಸಿಕೊಳ್ಳಲು ಭಾರತವನ್ನು ಒತ್ತಡ ಹೇರಲಾಗುತ್ತಿದೆ’ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ಜಪಾನ್ ಮತ್ತು ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌/ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ADVERTISEMENT

‘ಮಣಿಪುರದ ಜನರು ಈಗಲೂ ಪ್ರಧಾನಿ ಭೇಟಿಯಾಗಿ ಕಾಯುತ್ತಿದ್ದಾರೆ. ಆದರೆ ಪ್ರಧಾನಿ ಮಾತ್ರ ಕೈತೊಳೆದುಕೊಂಡಿದ್ದಾರೆ. ಪ್ರಧಾನಿ ಭೇಟಿ ಕುರಿತು ಚೀನಾ ತನ್ನದೇ ಲೆಕ್ಕಾಚಾರ ಹೊಂದಿದೆ. ತನ್ನೊಂದಿಗಿನ ಸಂಬಂಧವನ್ನು ಉತ್ತಮಪಡಿಸಿಕೊಳ್ಳಲು ಅದು ಒತ್ತಡ ಹೇರುತ್ತಿದೆ. ಇದಕ್ಕಾಗಿ ಅಮೆರಿಕದೊಂದಿಗಿನ ಸಂಬಂಧ ಹಳಸಿದ್ದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ’ ಎಂದಿದ್ದಾರೆ.

‘ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನದೊಂದಿಗೆ ಚೀನಾದ ಜುಗಲ್‌ಬಂಧಿ ಪಾತ್ರವನ್ನು ನಮ್ಮ ಸೈನಿಕರೇ ಬಹಿರಂಗಪಡಿಸಿದ್ದಾರೆ. ಅವೆಲ್ಲವನ್ನೂ ಪ್ರಧಾನಿ ಮರೆತರೇ’ ಎಂದು ಜೈರಾಮ್ ಪ್ರಶ್ನಿಸಿದ್ದಾರೆ.

‘ನ ಕೋಯಿ ಸೀಮಾ ಮೇ ಘುಸ್‌ ಆಯಾ ಹೈ, ನಾ ಹಿ ಕೋಯಿ ಘುಸಾ ಹುವಾ ಹೈ (ನಮ್ಮ ಗಡಿಯೊಳಗೆ ಯಾರೂ ನುಸುಳಿಲ್ಲ. ನುಸುಳಿರುವವರು ಯಾರೂ ನಮ್ಮ ದೇಶದಲ್ಲಿಲ್ಲ) ಎಂದು ಪ್ರಧಾನಿ ಮೋದಿ ಅವರು 2020ರ ಜೂನ್ 19ರಂದು ಹೇಳಿಕೆ ನೀಡಿದ್ದರು. ಈಗಿನ ಬೆಳವಣಿಗೆ ನಮ್ಮ ಎಲ್ಲಾ ನಿರೀಕ್ಷೆಗಳನ್ನೂ ತಲೆಕೆಳಗಾಗಿಸಿದೆ’ ಎಂದಿದ್ದಾರೆ.

‘ಪ್ರಧಾನಿ ಅವರ ಈ ಭೇಟಿಯಲ್ಲಿ ಭಾರತ ತನ್ನ ಘನತೆ ಪ್ರದರ್ಶಿಸಲು ಯಾವುದೇ ಅವಕಾಶ ಉಳಿದಿಲ್ಲ. 2020ರ ಏಪ್ರಿಲ್‌ ಪೂರ್ವದಲ್ಲಿದ್ದ ಯಥಾಸ್ಥಿತಿ ಮರುಸ್ಥಾಪನೆಯಲ್ಲೂ ವಿಫಲವಾದ ಪರಿಣಾಮ ಕುಖ್ಯಾತ ಮತ್ತು ವಂಚಕರಿಗೆ ಕ್ಲೀನ್ ಚಿಟ್‌ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಅತ್ತ ಜಪಾನ್ ಮತ್ತು ಚೀನಾಗೆ ಪ್ರಧಾನಿ ಅವರಿದ್ದ ವಿಮಾನ ಹಾರಾಟ ಆರಂಭಿಸಿದ ಸಂದರ್ಭದಲ್ಲೂ ಮಣಿಪುರ ಜನತೆ 2023ರ ಮೇನಲ್ಲಿ ತಮಗಾದ ಆಘಾತವನ್ನು ಸರಿಪಡಿಸಲು ಮೋದಿ ಬರುವರು ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ ಮಣಿಪುರದ ಜನತೆ, ರಾಜಕೀಯ ಪಕ್ಷಗಳು, ಮುಖಂಡರು, ನಾಗರಿಕ ಸಂಘಟನೆಗಳ ಕೋರಿಕೆಯನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ’ ಎಂದು ಜೈರಾಮ್ ಆರೋಪಿಸಿದ್ದಾರೆ.

ಈ ಪ್ರವಾಸಕ್ಕೂ ಮೊದಲು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ತಮ್ಮ ಈ ಪ್ರವಾಸದಲ್ಲಿ ರಾಷ್ಟ್ರದ ಹಿತ ಮತ್ತು ಆದ್ಯತೆಯೇ ಪ್ರಮುಖವಾಗಿದೆ. ಜಾಗತಿಕ ಶಾಂತಿ ಮತ್ತು ಪ್ರಾದೇಶಿಕ ಸಹಕಾರಕ್ಕಾಗಿ ಇತರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಪ್ರವಾಸ ನೆರವಾಗಲಿದೆ’ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಜಪಾನ್‌ನ ಟೊಕಿಯೊಗೆ ಬಂದಿಳಿದಿದ್ದು, ಆ. 30ರವರೆಗೆ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಎರಡು ದಿನಗಳ ಭೇಟಿಗೆ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. 

ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಅವರು ಭಾನುವಾರ ಭೇಟಿಯಾಗಲಿದ್ದಾರೆ. ಪೂರ್ವ ಲಡಾಕ್‌ನ ಗಡಿ ವಿವಾದವನ್ನೂ ಒಳಗೊಂಡು ಮಹತ್ವದ ವಿಷಯಗಳ ಕುರಿತು ಈ ಭೇಟಿಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.