ಚೆನ್ನೈ: ರಾಮೇಶ್ವರಂದಲ್ಲಿ ನಿರ್ಮಿಸಲಾಗಿರುವ ಭಾರತದ ಮೊದಲ ಲಿಫ್ಟ್ ಸೇತುವೆ ಹಾಗೂ ಇತರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6ರಂದು ಲೋಪಾರ್ಪಣೆ ಮಾಡಲಿದ್ದಾರೆ. ಭಾರತೀಯ ರೈಲ್ವೆಯು, ಅಧಿಕೃತ ಕಾರ್ಯಕ್ರಮದ ಮುನ್ನಾದಿನ ಪಂಬನ್ ಸೇತುವೆಯ ವಿಡಿಯೊವನ್ನು ಬಿಡುಗಡೆ ಮಾಡಿದೆ.
ರೈಲ್ವೆ ಸಚಿವಾಲಯವು, 'ಗತಿಸಿದ ಘಟನೆಗಳಿಗೆ ಸೇತುವೆಯಾಗಿ, ಹೊಸತನ್ನು ಎತ್ತಿ ಹಿಡಿಯುವ ಸಂಕೇತವಾಗಿ ಮನಮೋಹಕ ನೋಟದೊಂದಿಗೆ ಪಂಬನ್ ತಲೆ ಎತ್ತಿ ನಿಂತಿದೆ. ಭಾರತದ ಮೊದಲ ಲಂಬವಾಗಿ ತೆರೆಯುವ ಲಿಫ್ಟ್ ರೈಲು ಸೇತುವೆಗೆ ಈ ರಾಮನವಮಿ ಸಾಕ್ಷಿಯಾಗಿದೆ – ಒಂದೇ ದಿನದಲ್ಲಿ ಅನಾವರಣಗೊಳ್ಳಲಿದೆ' ಎಂದು ತಿಳಿಸಿದೆ.
₹ 550 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮುನ್ನ, ಕರಾವಳಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನೂತನ ಪಂಬನ್ ರೈಲು ಸೇತುವೆ, ರಾಮೇಶ್ವರಂ–ತಂಬರಮ್ (ಚೆನ್ನೈ) ಹೊಸ ರೈಲು ಸೇವೆ ಹಾಗೂ ಕರಾವಳಿ ಭದ್ರತಾ ಪಡೆ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 6) ಮಧ್ಯಾಹ್ನ ಚಾಲನೆ ನೀಡಲಿದ್ದಾರೆ. ಲಿಫ್ಟ್ ಸೇತುವೆ ಲಂಬವಾಗಿ ತೆರೆಯುತ್ತಿದ್ದಂತೆ ಭದ್ರತಾ ಪಡೆ ಹಡಗು ಸಾಗಲಿದ್ದು, ಕಾರ್ಯಾಚರಣೆ ಆರಂಭವಾಗಲಿದೆ.
ರಾಮೇಶ್ವರಂನಲ್ಲಿ ನವೀಕರಣಗೊಂಡಿರುವ ರಾಮನಾಥಸ್ವಾಮಿ ದೇವಾಲಯಕ್ಕೆ ಮೋದಿ ಅವರು ಮಧ್ಯಾಹ್ನ 12.45ಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ನಂತರ, ತಮಿಳುನಾಡಿನಲ್ಲಿ ಕೈಗೊಳ್ಳಲಿರುವ ಸುಮಾರು ₹ 8,300 ಕೋಟಿ ಮೊತ್ತದ ವಿವಿಧ ರೈಲು ಹಾಗೂ ರಸ್ತೆ ಯೋಜನೆಗಳಿಗೆ 1.30ರ ಸುಮಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.