ನವದೆಹಲಿ: ವ್ಯಾಪಾರ ವಿಷಯವನ್ನು ಪ್ರಸ್ತಾಪಿಸಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವನ್ನು ಶಮನಗೊಳಿಸಲಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಭಾರತ-ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಶಮನಗೊಳಿಸಿರುವುದಾಗಿ ಕಳೆದ 59 ದಿನಗಳಲ್ಲಿ ಕನಿಷ್ಠ 21ನೇ ಸಲ ಟ್ರಂಪ್ ಹೇಳಿದ್ದಾರೆ. ಈ ಯುದ್ಧವೂ ನ್ಯೂಕ್ಲಿಯರ್ ಹಂತಕ್ಕೆ ಹೋಗುವ ಭೀತಿಯಲ್ಲಿತ್ತು ಎಂದೂ ಉಲ್ಲೇಖಿಸಿದ್ದಾರೆ. ವ್ಯಾಪಾರ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಭಾರತ-ಅಮೆರಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು' ಎಂಬ ಟ್ರಂಪ್ ಹೇಳಿಕೆಯನ್ನು ಜೈರಾಮ್ ಉಲ್ಲೇಖಿಸಿದ್ದಾರೆ.
'ಬೇರೆ ರೀತಿಯಲ್ಲಿ ಹೇಳುವುದಾದರೆ ಟ್ರಂಪ್ ಅವರ ಸಂದೇಶ ಹೀಗಿತ್ತು. ಯುದ್ಧವನ್ನೇ ತಕ್ಷಣವೇ ನಿಲ್ಲಿಸಿ ಅಥವಾ ಅಮೆರಿಕದ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ' ಎಂದು ಜೈರಾಮ್ ಬರೆದಿದ್ದಾರೆ.
'ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕ ಶೀಘ್ರದಲ್ಲೇ ವ್ಯಾಪಾರ ಒಪ್ಪಂದವನ್ನು ಪ್ರಕಟಿಸಲಾಗುವುದು ಎಂದು ಘೋಷಿಸಿದ್ದಂತೆಯೇ ಈ ಹೇಳಿಕೆಯನ್ನು ಟ್ರಂಪ್ ನೀಡಿದ್ದಾರೆ. ಈ ವಿಷಯದಲ್ಲಿ ಘನಶ್ಯಾಮ್ ತಿವಾರಿ ಬಣ್ಣಿಸಿದಂತೆ ಬಿಜೆಪಿಯ ಟ್ರಂಪ್ ಕಾರ್ಡ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯುವುದು ಯಾವಾಗ?' ಎಂದು ಪ್ರಶ್ನಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದ್ದಾಗಿ ಟ್ರಂಪ್ ಹೇಳಿದ್ದರು. 'ನಾವು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅದರಲ್ಲಿ ಭಾರತ ಹಾಗಾ ಪಾಕಿಸ್ತಾನ ನಡುವಣ ಬಹಳ ದೊಡ್ಡ ಯುದ್ಧವನ್ನು ಶಮನಗೊಳಿಸಿದ್ದೇವೆ. ವ್ಯಾಪಾರದ ವಿಷಯವನ್ನು ಪ್ರಸ್ತಾಪಿಸಿ ನಾವು ಅದನ್ನು ನಿಲ್ಲಿಸಿದ್ದೇವೆ' ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.