ADVERTISEMENT

LS polls: ಬಿಜೆಪಿಯಿಂದ ಸ್ಪರ್ಧಿಸಲು ಅರುಣ್ ಗೋಯಲ್ ರಾಜೀನಾಮೆ ನೀಡಿರಬಹುದು: ರಮೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2024, 6:02 IST
Last Updated 10 ಮಾರ್ಚ್ 2024, 6:02 IST
<div class="paragraphs"><p>ಜೈರಾಮ್ ರಮೇಶ್</p></div>

ಜೈರಾಮ್ ರಮೇಶ್

   

ಪಿಟಿಐ ಚಿತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಿನಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದಲ್ಲಿ ‘ಚುನಾವಣಾ ಆಯುಕ್ತ’ ಹುದ್ದೆಯು ಎರಡನೆಯ ಅತ್ಯುನ್ನತ ಸ್ಥಾನ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಚುನಾವಣಾ ಆಯೋಗವು ನ್ಯಾಯಯುತ, ಸಾಂವಿಧಾನಿಕ ಸಂಸ್ಥೆಯಾಗಿದೆ. ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ಶನಿವಾರ ರಾಜೀನಾಮೆ ನೀಡಿದ್ದಾರೆ. ನನ್ನ ಅನಿಸಿಕೆ ಪ್ರಕಾರ ಗೋಯಲ್ ರಾಜೀನಾಮೆಗೆ ಮೂರು ಕಾರಣಗಳು ಇರಬಹುದು. ಮೊದಲನೆಯದಾಗಿ ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಹಾಗೂ ಅರುಣ್ ಗೋಯಲ್ ನಡುವೆ ಏನಾದರೂ ಭಿನ್ನಾಭಿಪ್ರಾಯಗಳಿವೆಯೇ? ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಏನಾದರೂ ವ್ಯತ್ಯಾಸಗಳಿವೆಯೇ? ಎರಡನೆಯದಾಗಿ ಕೆಲವು ವೈಯಕ್ತಿಕ ಕಾರಣಗಳಿರಬಹುದು. ಮೂರನೇಯದಾಗಿ ಗೋಯಲ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ರಾಜೀನಾಮೆ ನೀಡಿದ್ದಾರೆಯೇ? ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

ಅರುಣ್ ಗೋಯಲ್ ಅವರು 2027ರ ಡಿಸೆಂಬರ್‌ವರೆಗೆ ಅಧಿಕಾರ ಅವಧಿಯನ್ನು ಹೊಂದಿದ್ದರು. ಅಲ್ಲದೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಿವೃತ್ತರಾದ ನಂತರ ಗೋಯಲ್ ಅವರೇ ಸಿಇಸಿ ಸ್ಥಾನಕ್ಕೆ ಬರುವವರಿದ್ದರು. ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಗೀಕರಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಗೋಯಲ್ ಅವರು ರಾಜೀನಾಮೆ ನೀಡಿರುವುದಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಅವರು 1985ನೇ ಬ್ಯಾಚ್‌ನ, ಪಂಜಾಬ್‌ ಕೇಡರ್‌ನ ಐಎಎಸ್ ಅಧಿಕಾರಿ. ಅವರು 2022ರ ನವೆಂಬರ್‌ನಲ್ಲಿ ಚುನಾವಣಾ ಆಯುಕ್ತರಾಗಿ ನೇಮಕ ಆಗಿದ್ದರು. ಚುನಾವಣಾ ಆಯೋಗದ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕು. ಆದರೆ ಅನೂಪ್ ಪಾಂಡೆ ಅವರ ನಿವೃತ್ತಿ ಹಾಗೂ ಗೋಯಲ್ ಅವರ ರಾಜೀನಾಮೆಯ ಪರಿಣಾಮವಾಗಿ ಈಗ ರಾಜೀವ್ ಕುಮಾರ್ ಮಾತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.