ADVERTISEMENT

ಅಮೆರಿಕ–ಭಾರತ ಮಧ್ಯಂತರ ಒಪ್ಪಂದ ಅಂತಿಮ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ

ಪಿಟಿಐ
Published 7 ಫೆಬ್ರುವರಿ 2026, 16:15 IST
Last Updated 7 ಫೆಬ್ರುವರಿ 2026, 16:15 IST
<div class="paragraphs"><p>ಭಾರತ-ಅಮೆರಿಕ</p></div>

ಭಾರತ-ಅಮೆರಿಕ

   

ನವದೆಹಲಿ/ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಶನಿವಾರ ಜಂಟಿಯಾಗಿ ಘೋಷಿಸಿದ್ದು, ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಪೂರಕವಾಗಿ ಹಲವು ಸರಕುಗಳ ಮೇಲಿನ ಆಮದು ಸುಂಕ ಕಡಿತಗೊಳಿಸುವುದಾಗಿ ಪ್ರಕಟಿಸಿವೆ. 

ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಈಗಿನ ಶೇ 50ರಿಂದ ಶೇ 18ಕ್ಕೆ ಇಳಿಸಿದರೆ, ಅದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದ ಕೈಗಾರಿಕಾ ಸರಕುಗಳು, ಪಶು ಆಹಾರಕ್ಕೆ ಬಳಸುವ ಗೋವಿನ ಜೋಳ,  ‘ಡ್ರೈಫ್ರೂಟ್ಸ್‌’, ಕೆಲ ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್‌ ಎಣ್ಣೆ, ವೈನ್‌ ಮತ್ತು ಸ್ಪಿರಿಟ್‌ ಮೇಲಿನ ಸುಂಕವನ್ನು ಪೂರ್ಣವಾಗಿ ತೆಗೆದುಹಾಕಲಿದೆ ಅಥವಾ ಕಡಿತಗೊಳಿಸಲಿದೆ. 

ADVERTISEMENT

ಈ ಒಪ್ಪಂದದ ಪರಿಣಾಮ ಭಾರತದ ರಫ್ತುದಾರರಿಗೆ ಅಮೆರಿಕದ 30 ಟ್ರಿಲಿಯನ್ ಡಾಲರ್‌ನಷ್ಟು ವಿಶಾಲ ಮಾರುಕಟ್ಟೆ ತೆರೆದುಕೊಳ್ಳಲಿದೆ. ಅಲ್ಲದೆ ಕೃಷಿ, ಮೀನುಗಾರಿಕೆ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಕ್ಷೇತ್ರಗಳಲ್ಲಿ ಭಾರತದ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ ಎಂದು ಭಾರತ ಪ್ರತಿಪಾದಿಸಿದೆ.

ಉಭಯ ದೇಶಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 500 ಬಿಲಿಯನ್‌ ಡಾಲರ್‌ ಮೊತ್ತದಷ್ಟು ಇಂಧನ ಉತ್ಪನ್ನಗಳು, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನದ ಉತ್ಪನ್ನಗಳು, ಕಲ್ಲಿದ್ದಲನ್ನು ಖರೀದಿಸುವ ಉದ್ದೇಶವನ್ನು ಭಾರತ ವ್ಯಕ್ತಪಡಿಸಿದೆ. 

ಔಷಧ, ವಜ್ರಕ್ಕೆ ಶೂನ್ಯ ಸುಂಕ

ಈ ಒಪ್ಪಂದದಿಂದಾಗಿ ಭಾರತದ ಜೆನರಿಕ್‌ ಔಷಧಗಳು, ರತ್ನಗಳು, ವಜ್ರಗಳು ಮತ್ತು ವಿಮಾನ ಬಿಡಿಭಾಗಗಳ ರಫ್ತಿನ ಮೇಲಿನ ಸುಂಕ ಶೂನ್ಯಕ್ಕೆ ಇಳಿಯುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.  ಇದರಿಂದ ಭಾರತದ ರಫ್ತು ಸ್ಪರ್ಧಾತ್ಮಕತೆ ಮತ್ತು ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನ ವೃದ್ಧಿಸುತ್ತದೆ. ಇದರ ಪರಿಣಾಮ ಈ ವಲಯಗಳಲ್ಲಿನ ರಫ್ತಿನಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.  

ರಫ್ತು ಹೆಚ್ಚಳಕ್ಕೆ ದೊರೆತಿರುವ ಈ ಅವಕಾಶವು ದೇಶದ ಮಹಿಳೆಯರು ಮತ್ತು ಯುವ ಸಮುದಾಯಕ್ಕೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಭಾರತವು ಅಮೆರಿಕದ ಜತೆಗೆ ಮಧ್ಯಂತರ ಒಪ್ಪಂದದ ಚೌಕಟ್ಟನ್ನು ಅಂತಿಮಗೊಳಿಸಿದೆ. ಇದರ ಭಾಗವಾಗಿ ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಭಾರತದ ಜವಳಿ, ಉಡುಪು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್‌, ರಬ್ಬರ್‌ ಉತ್ಪನ್ನಗಳು, ಸಾವಯವ ರಾಸಾಯನಿಕಗಳು, ಗೃಹಾಲಂಕಾರ, ಕುಶಲಕರ್ಮಿ ಉತ್ಪನ್ನಗಳು, ಸ್ಮಾರ್ಟ್‌ಪೋನ್‌ಗಳು ಸೇರಿದಂತೆ ಆಯ್ದ ಯಂತ್ರೋಪಕರಣಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಮಾರ್ಚ್‌ನಲ್ಲಿ ಸಹಿ ಹಾಕುವ ನಿರೀಕ್ಷೆಯಿದೆ.  

ಹೆಚ್ಚುವರಿ ಸುಂಕದ ಆದೇಶ ರದ್ದು
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಕಾರಣ ಭಾರತದ ಮೇಲೆ 2025ರ ಆಗಸ್ಟ್‌ನಲ್ಲಿ ವಿಧಿಸಿದ್ದ ಶೇ 25ರಷ್ಟು ಹೆಚ್ಚುವರಿ ಆಮದು ಸುಂಕದ ಆದೇಶವನ್ನು ರದ್ದುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ‘ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಮಾಸ್ಕೊದಿಂದ ನೇರ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧತೆ ವ್ಯಕ್ತಪಡಿಸಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಯಾವುದಕ್ಕೆ ಪೂರ್ಣ ರಕ್ಷಣೆ?

  • ಗೋಧಿ, ಅಕ್ಕಿ, ಸೋಯಾ, ಮೆಕ್ಕೆಜೋಳ, ಎಣ್ಣೆ ಬೀಜಗಳು, ಕೋಳಿ, ಕೆಲ ಬಗೆಯ ಮಾಂಸ, ಎಥೆನಾಲ್‌, ತಂಬಾಕು. ಹಾಲು, ಚೀಸ್‌, ಬೆಣ್ಣೆ, ತುಪ್ಪ, ಕ್ರೀಮ್‌, ಮೊಸರು, ಮಜ್ಜಿಗೆ, ಯೋಗರ್ಟ್‌, ಪನ್ನೀರ್‌

  • ಆಲೂಗಡ್ಡೆ, ಬೆಳ್ಳುಳ್ಳಿ, ಈರುಳ್ಳಿ, ಅಣಬೆ, ಸೋರೆಕಾಯಿ, ಬೆಂಡೆಕಾಯಿ, ಹಸಿರು ಮೆಣಸು, ಬಟಾಣಿ, ಬೀನ್ಸ್‌, ಕುಂಬಳಕಾಯಿ ಸೇರಿದಂತೆ ಇತರ ತಾಜಾ ತರಕಾರಿಗಳು, ಹಾಗೂ ಘನೀಕರಿಸಿದ ಆಲೂಗಡ್ಡೆ, ಬಟಾಣಿ, ಬೀನ್ಸ್‌, ಮಿಶ್ರ ತರಕಾರಿ, ಅಣಬೆಗಳು 

  • ಬಾಳೆಹಣ್ಣು, ಬಾಳೆ ಉತ್ಪನ್ನಗಳು, ಮಾವು ಮತ್ತು ಮಾವಿನ ಉತ್ಪನ್ನಗಳು, ಕಿತ್ತಳೆ, ನಿಂಬೆ, ದ್ರಾಕ್ಷಿ ಸೇರಿದಂತೆ ಸಿಟ್ರಿಕ್‌ ಹಣ್ಣುಗಳು, ಸ್ಟ್ರಾಬೆರಿ ಸೇರಿದಂತೆ ವಿವಿಧ ಹಣ್ಣುಗಳು  

  • ಕರಿಮೆಣಸು, ಲವಂಗ, ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ಅರಿಸಿನ, ಓಮಕಾಳು, ಮೆಂತ್ಯ, ಸಾಸಿವೆ ಸೇರಿದಂತೆ ಮಸಾಲೆ ಪದಾರ್ಥಗಳು. ಬ್ಲ್ಯಾಕ್‌ ಟೀ, ಗ್ರೀನ್‌ ಟೀ ಮತ್ತು ಟೀ ಬ್ಯಾಗ್‌ಗಳು

ಯಾವುದಕ್ಕೆ ಸುಂಕ ಕಡಿತ / ಸುಂಕ ತೆರವು

  • ಯಂತ್ರೋಪಕರಣ, ಎಲೆಕ್ಟ್ರಿಕಲ್ಸ್‌, ವಾಹನಗಳು ಮತ್ತು ಘಟಕಗಳು, ರಾಸಾಯನಿಕಗಳು

  • ಉನ್ನತ ಮಟ್ಟದ ಸರ್ವರ್‌ಗಳು, ಎಐ ಹಾರ್ಡ್‌ವೇರ್‌, ದತ್ತಾಂಶ ಕೇಂದ್ರದ ಉಪಕರಣಗಳು, ಸೆಮಿಕಂಡಕ್ಟರ್‌ ಇನ್‌ಪುಟ್‌ಗಳು 

  • ಡ್ರೈಫ್ರೂಟ್‌ಗಳು, ಸೋಯಾಬೀನ್‌ ಎಣ್ಣೆ, ಆಯ್ದ ಹಣ್ಣುಗಳು, ವೈನ್‌, ಸ್ಪಿರಿಟ್‌ 

ಅಮೆರಿಕವು ಭಾರತಕ್ಕೆ ಏನು ನೀಡುತ್ತದೆ?

  • ಈ ಮೊದಲು ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿದ್ದ ಭಾರತೀಯ ರಫ್ತು ಸರಕುಗಳ ಮೇಲಿನ ಸುಂಕವನ್ನು ಅಮೆರಿಕ ಏಕರೂಪವಾಗಿ ಶೇ 18ಕ್ಕೆ ಅನ್ವಯಿಸಲಿದೆ  

  • ಜವಳಿ, ಉಡುಪು, ಚರ್ಮ ಮತ್ತು ಪಾದರಕ್ಷೆ, ಪ್ಲಾಸ್ಟಿಕ್‌, ರಬ್ಬರ್‌ ಸರಕುಗಳು, ಗೃಹ ಅಲಂಕಾರ, ಕಾರ್ಪೆಟ್‌ಗಳು, ಯಂತ್ರೋಪಕರಣ, ರಾಸಾಯನಿಕಗಳು, ಕುಶಲಕರ್ಮಿ ಸರಕುಗಳಿಗೆ ಏಕರೂಪ ಸುಂಕ ಅನ್ವಯವಾಗಲಿದೆ 

  • ಒಪ್ಪಂದದಲ್ಲಿ ಮದ್ಯವನ್ನು ‘ಮುಕ್ತ ವರ್ಗ’ದಲ್ಲಿ ಸೂಚಿಸಲಾಗಿದೆ

  • ಈ ಹಿಂದೆ ಶೇ 150ರಷ್ಟು ಸುಂಕ ಎದುರಿಸುತ್ತಿದ್ದ ವಿಸ್ಕಿ, ಜಿನ್‌, ರಮ್‌ ಮತ್ತು ಸ್ಪಿರಿಟ್‌ಗಳ ಮೇಲಿನ ಸುಂಕ ಗಣನೀಯವಾಗಿ ಕಡಿಮೆಯಾಗಲಿದೆ. ಭಾರತ– ಅಮೆರಿಕ ಮತ್ತು ಭಾರತ– ಐರೋಪ್ಯ ಒಕ್ಕೂಟದ (ಇ.ಯು) ವ್ಯಾಪಾರ ಒಪ್ಪಂದಗಳಿಂದಾಗಿ ಇದು ಶೇ 30ರಿಂದ ಶೇ 40ರಷ್ಟಕ್ಕೆ ಇಳಿಯುವ ನಿರೀಕ್ಷೆಯಿದೆ.

ಒಪ್ಪಂದಕ್ಕೆ ಕಾಂಗ್ರೆಸ್‌ ಟೀಕೆ

ಭಾರತ–ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. 

ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ಅಮೆರಿಕ ಮೇಲ್ವಿಚಾರಣೆ ಮಾಡುತ್ತದೆ ಎಂದು ಶ್ವೇತಭವನ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ‘ನಾಮ್‌ ನರೇಂದರ್‌, ಕಾಮ್‌ ಸರೆಂಡರ್‌’ ಎಂದು ವ್ಯಂಗ್ಯವಾಡಿದೆ.   

‘ಉಭಯ ದೇಶಗಳ ಜಂಟಿ ಹೇಳಿಕೆಯು ಹೆಚ್ಚಿನ ವಿವರಗಳಿಂದ ಕೂಡಿಲ್ಲ. ಬಿಡುಗಡೆ ಆಗಿರುವ ಪ್ರಕಟಣೆ ಪ್ರಕಾರ, ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಖರೀದಿಸಲು ಮುಂದಾದರೆ ಅಮೆರಿಕ ಪುನಃ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಬಹುದು ಎಂದು ಘೋಷಿಸಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಭಾರತೀಯರ ರೈತರ ವೆಚ್ಚದಲ್ಲಿ ಅಮೆರಿಕದ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ‘ ಎಂದು ಅವರು ತಿಳಿಸಿದ್ದಾರೆ.  

‘ಈ ಒಪ್ಪಂದದ ಪರಿಣಾಮ ಭಾರತವು ಅಮೆರಿಕದಿಂದ ಖರೀದಿಸಲಿರುವ ಸರಕುಗಳು ಮೂರು ಪಟ್ಟು ಹೆಚ್ಚಲಿವೆ. ಪ್ರತಿಯಾಗಿ ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಐ.ಟಿ ಮತ್ತು ಇತರ ಸೇವೆಗಳ ಮೇಲಿನ ಅನಿಶ್ಚಿತತೆ ಮುಂದುವರಿಯುತ್ತದೆ. ಭಾರತದ ಸರಕುಗಳು ಅಮೆರಿಕದಲ್ಲಿ ಮೊದಲಿಗಿಂತ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗುತ್ತದೆ’ ಎಂದು ರಮೇಶ್‌ ಹೇಳಿದ್ದಾರೆ.  

‘ಮೋದಿ– ಟ್ರಂಪ್‌ ಗೆಳೆತನ, ಅಪ್ಪುಗೆಗಳು, ಫೋಟೊ ಪ್ರದರ್ಶನಗಳು ಭಾರತಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ’ ಎಂದು ಅವರು ಜರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.