ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಪಿಟಿಐ ಚಿತ್ರ
ಶ್ರೀನಗರ: ಭಯೋತ್ಪಾದನೆ ಮುಕ್ತ ಜಮ್ಮು ಮತ್ತು ಕಾಶ್ಮೀರ ನಿರ್ಮಾಣಕ್ಕೆ ಪಾಕಿಸ್ತಾನದ ದ್ವೇಷ ಸಾಧನೆಯ ಉದ್ದೇಶವು ಪ್ರಬಲ ಸವಾಲಾಗಿ ಉಳಿದಿದೆ ಎಂದು ಹೇಳಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಯಾವುದೇ ರೀತಿಯ ಉಗ್ರ ಕೃತ್ಯವನ್ನು ಭಾರತವು ಯುದ್ಧವೆಂದೇ ಪರಿಗಣಿಸಲಿದೆ ಎನ್ನುವ ಮೂಲಕ ನೆರೆ ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಬ್ದುಲ್ಲಾ, ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದರಿಂದ ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಸಾಧ್ಯವಾಗಲಿದೆ ಎಂಬ ಕಥನವನ್ನು ಅಲ್ಲಗಳೆದಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರು ಇತ್ತೀಚೆಗೆ ನಡೆಸಿದ ದಾಳಿ ವೇಳೆ 26 ಮಂದಿ ಹತ್ಯೆಯಾಗಿರುವುದು, ಸಂವಿಧಾನದ 370ನೇ ವಿಧಿ ಕುರಿತ ಹೇಳಿಕೆಗಳು ಸುಳ್ಳು ಎಂಬುದನ್ನು ಸಾಬೀತು ಮಾಡಿದೆ ಎಂದಿದ್ದಾರೆ.
'ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಲ್ಲ. ದ್ವೇಷ ಸಾಧನೆಯೇ ಪಾಕಿಸ್ತಾನದ ಉದ್ದೇಶವಾಗಿದ್ದರೆ, ಭಯೋತ್ಪಾದನೆ ಮುಕ್ತ ಜಮ್ಮು ಮತ್ತು ಕಾಶ್ಮೀರವನ್ನು ಕಾಣಲು ಸಾಧ್ಯವಾಗದು. ಪಹಲ್ಗಾಮ್ ದಾಳಿ ಅದನ್ನು ಜಾಹೀರು ಮಾಡಿದೆ ಎಂದು ನನಗನಿಸುತ್ತದೆ' ಎಂದಿದ್ದಾರೆ.
'ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯು ಸಂವಿಧಾನದ 370ನೇ ವಿಧಿಯ ಫಲ ಎಂಬ ನಿರೂಪಣೆಯನ್ನು ಪ್ರಸಾರ ಮಾಡಲು ಬಿಜೆಪಿ ಭಾರಿ ಪ್ರಯತ್ನ ಮಾಡುತ್ತಿದೆ. ಅದು ಸತ್ಯವಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಗೆ ಕಾರಣ ಪಾಕಿಸ್ತಾನದ ಉದ್ದೇಶಗಳು. ಹಾಗಾಗಿ, 370ನೇ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವುದರಿಂದಷ್ಟೇ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
'ಪಾಕಿಸ್ತಾನವು ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ' ಎಂದು ಒತ್ತಿ ಹೇಳಿರುವ ಸಿಎಂ, ಆಕ್ರಮಣಕಾರಿ ನಡೆಯನ್ನು ಭಾರತ ಗಂಭೀರವಾಗಿ ಪರಿಗಣಿಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
'ಉಗ್ರ ಕೃತ್ಯಗಳ ಬಗ್ಗೆ ತೋರುತ್ತಿರುವ ಮೃದು ಧೋರಣೆಯಿಂದ ಭಾರತಕ್ಕೆ ಸಮಸ್ಯೆಯಾಗುತ್ತಿರುವಂತೆ, ಪಾಕಿಸ್ತಾನಕ್ಕೂ ತೊಂದರೆಯಾಗುತ್ತಿದೆ ಎಂಬುದನ್ನು ಪಾಕ್‌ಗೆ ಮನವರಿಕೆ ಮಾಡಿಕೊಡುವುದು ದೊಡ್ಡ ಸವಾಲಾಗಿದೆ' ಎಂದು ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
'ಯಾವುದೇ ರೀತಿಯ ದಾಳಿಗಳನ್ನು ಭಾರತವು ಯುದ್ಧದ ಕೃತ್ಯಗಳೆಂದೇ ಪರಿಗಣಿಸಲಿದೆ. ಹಾಗಾಗಿ, ಪಾಕಿಸ್ತಾನವು ತನ್ನ ನೆರೆ ರಾಷ್ಟ್ರವನ್ನು ಯುದ್ಧಕ್ಕೆ ಆಹ್ವಾನಿಸಲು ಬಯಸುತ್ತದೆಯೇ ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು' ಎಂದು ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ, 'ಭದ್ರತೆ ಹಾಗೂ ಗುಪ್ತಚರ ವೈಫಲ್ಯ'ವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಒಪ್ಪಿಕೊಂಡಿರುವುದು ಧನಾತ್ಮಕ ಹೆಜ್ಜೆ ಎಂದು ಸಿಎಂ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.