ಆಪರೇಷನ್ ಸಿಂಧೂರ ವೇಳೆ ಸೈನಿಕರಿಗೆ ಅಹಾರ ನೀಡಿದ ಬಾಲಕನ ಶಿಕ್ಷಣ ವೆಚ್ಚ ಭರಿಸಲಿರುವ ಸೇನೆ
ಚಿತ್ರ ಕೃಪೆ: ಎಕ್ಸ್
ಚಂಡೀಗಢ: ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಯೋಧರಿಗೆ ಆಹಾರ ಪೂರೈಸಿದ 10 ವರ್ಷದ ಬಾಲಕನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಭಾರತೀಯ ಸೇನೆ ಭಾನುವಾರ ಹೇಳಿದೆ.
ಶ್ವನ್ ಸಿಂಗ್ ಎನ್ನುವ ಬಾಲಕ ಪಂಜಾಬ್‌ನ ಫಿರೋಜಪುರ್ ಜಿಲ್ಲೆಯ ತಾರಾವಾಲಿ ಗ್ರಾಮದಲ್ಲಿ ನಿಯೋಜನೆಗೊಂಡ ಸೈನಿಕರು ಪಾಕಿಸ್ತಾನದ ಸೇನೆ ಜತೆಗೆ ಗುಂಡಿನ ಚಕಮಕಿ ನಡೆಸುತ್ತಿದ್ದ ವೇಳೆ ನೀರು, ಚಹಾ, ಹಾಲು, ಲಸ್ಸಿ ಸೇರಿ ವಿವಿಧ ರೀತಿಯ ಆಹಾರವನ್ನು ಪೂರೈಸಿದ್ದ. ಬಾಲಕನ ಧೈರ್ಯ ಮತ್ತು ಉತ್ಸಾಹ ಕಂಡು ಭಾರತೀಯ ಸೇನೆಯ ಗೋಲ್ಡನ್ ಆ್ಯರೋ ವಿಭಾಗವು ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದೆ.
ಶ್ವನ್ ಸಿಂಗ್ ಮಾಡಿದ ಕೆಲಸ ತೆರೆಮರೆಯಲ್ಲಿರುವ ಹೀರೋಗಳನ್ನು ನೆನಪಿಸುತ್ತದೆ. ಬಾಲಕ ಕೂಡ ದೊಡ್ಡವನಾದ ಮೇಲೆ ಸೇನೆ ಸೇರುವ ಅಭಿಲಾಷೆ ಹೊಂದಿದ್ದಾನೆ ಎಂದು ಸೇನೆ ಹೇಳಿದೆ.
ತಾರಾವಾಲಿ ಗ್ರಾಮ ಅಂತರರಾಷ್ಟ್ರೀಯ ಗಡಿಯಿಂದ 2 ಕಿ.ಮೀ. ದೂರದಲ್ಲಿದೆ.
ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನವನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.