ಶುಭಾಂಶು ಶುಕ್ಲಾ
(ರಾಯಿಟರ್ಸ್ ಚಿತ್ರ)
ನವದೆಹಲಿ: ‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪ್ರಯಾಣ ಬೆಳೆಸಿರುವುದಕ್ಕೆ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅತ್ಯಂತ ಹೆಮ್ಮೆಯಿಂದ ಆಗಸವನ್ನು ಸ್ಪರ್ಶಿಸಿ’ ಎಂದು ಶುಭಾಂಶು ಅವರಿಗೆ ಶುಭಾಶಯ ಕೋರಿದ್ದಾರೆ.
‘ಭಾರತವನ್ನೂ ಒಳಗೊಂಡಂತೆ ಹಂಗೇರಿ, ಪೊಲೆಂಡ್ ಮತ್ತು ಅಮೆರಿಕದ ಗಗನಯಾನಿಗಳನ್ನು ಹೊತ್ತ ಬಾಹ್ಯಾಕಾಶ ಯೋಜನೆಯು ಯಶಸ್ವಿಯಾಗಿ ಉಡ್ಡಯನಗೊಂಡಿದ್ದು ಸಂತಸ ತಂದಿದೆ’ ಎಂದಿದ್ದಾರೆ.
1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ಯೋಜನೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಇದಾಗಿ ಬರೋಬ್ಬರಿ ನಾಲ್ಕು ದಶಕಗಳ ನಂತರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ.
‘ಅವರ ಬಾಹ್ಯಾಕಾಶ ಯಾನ ಯಶಸ್ವಿಯಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ’ ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ‘ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿರುವುದು ಇಡಿ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. 41 ವರ್ಷಗಳ ಹಿಂದೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ ಅವರ ನಂತರದಲ್ಲಿ ಶುಭಾಂಶು ಅವರ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ಅವರ ಇಡೀ ತಂಡ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.
ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆ ಮೂಲಕವೂ ಶುಭಾಂಶು ಮತ್ತು ಇಡೀ ಯೋಜನೆಗೆ ಅಭಿನಂದನೆ ಸಲ್ಲಿಸಲಾಗಿದೆ.
ಶುಭಾಂಶು ಶುಕ್ಲಾ ಸೇರಿದಂತೆ ಅಮೆರಿಕ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳಿರುವ ಗಗನನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ 12.01ಕ್ಕೆ ನಭಕ್ಕೆ ಚಿಮ್ಮಿದೆ.
ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವದಲ್ಲಿ, ಶುಕ್ಲಾ, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ಸ್ಕಿ ಕೂಡ ಐಎಸ್‌ಎಸ್‌ಗೆ ತೆರಳಿದ್ದಾರೆ. ಜೂನ್ 26ರಂದು ಬೆಳಿಗ್ಗೆ 7ಕ್ಕೆ (ಭಾರತೀಯ ಕಾಲಮಾನ), ಶುಕ್ಲಾ ಅವರು ಇರುವ ಗಗನನೌಕೆಯನ್ನು ಐಎಸ್‌ಎಸ್‌ಗೆ ಜೋಡಿಸುವ ಗುರಿ ಹೊಂದಲಾಗಿದೆ.
‘ನಾಸಾ, ಆ್ಯಕ್ಸಿಯಂ ಸ್ಪೇಸ್ ಹಾಗೂ ಇಲಾನ್ ಮಸ್ಕ್ ಒಡೆತನ ಸ್ಪೇಸ್‌ಎಕ್ಸ್ ಜಂಟಿಯಾಗಿ ಈ ಬಾಹ್ಯಾಕಾಶ ಕಾರ್ಯಕ್ರಮ ರೂಪಿಸಿವೆ. ವಿವಿಧ ಕಾರಣಗಳಿಗಾಗಿ ಒಟ್ಟು ಆರು ಬಾರಿ ಈ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.