ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾರ್ಜಿಂಗ್‌ಗಾಗಿ ಪ್ರಯಾಣಿಕರ ನೂಕುನುಗ್ಗಲು
ಎಕ್ಸ್ ಚಿತ್ರ
ನಿನ್ನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾನು ಇಂಡಿಗೊ ವಿಮಾನ ಹತ್ತಿದಾಗ, ನನ್ನ ಟಿಕೆಟ್ ಘನತೆ, ಸ್ಪಷ್ಟತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಎಂದು ಇತರರಂತೆ ನಾನೂ ನಂಬಿದ್ದೆ. ಆದರೆ ಅದರ ಬದಲಾಗಿ ನಾವು ಅನುಭವಿಸಿದ್ದು ಭಾವನಾತ್ಮಕ ಪ್ರಕ್ಷುಬ್ಧತೆ, ಕಾರ್ಯಾಚರಣೆಯ ಕುಸಿತ ಮತ್ತು ನಿಯಂತ್ರಕರ ಮೌನ. ಇವುಗಳನ್ನು ಸಹಿಸಿಕೊಂಡೇ ರಾತ್ರಿ ಕಳೆಯಬೇಕಾಯಿತು.
ಬುಕಿಂಗ್ ದೃಢೀಕರಣ, ಸೀಟು ಹಂಚಿಕೆ, ಬೋರ್ಡಿಂಗ್ ಪಾಸ್‌ಗಳ ವಿತರಣೆ ಎಲ್ಲವೂ ಸಾಮಾನ್ಯದಂತೆಯೇ ಕಾಣುತ್ತಿತ್ತು. ಆದರೆ ಪ್ರಯಾಣಿಕರು ತಮ್ಮ ಟರ್ಮಿನಲ್‌ಗಳತ್ತ ಹೋಗುತ್ತಿದ್ದಂತೆ ಮಾಹಿತಿ ಪರದೆಗಳು ಬೇರೆಯದನ್ನೇ ಹೇಳುತ್ತಿದ್ದವು. ವಿಮಾನಗಳ ನಿರ್ಗಮನ ಅನಿರ್ದಿಷ್ಟಾವಧಿ ಎಂಬುದು ಆಘಾತ ಮೂಡಿಸಿತು. ಗೊಂದಲಕ್ಕೊಳಗಾದ ಅಥವಾ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಿಬ್ಬಂದಿ ಏನನ್ನೂ ಸ್ಪಷ್ಟವಾಗಿ ಹೇಳುತ್ತಿರಲಿಲ್ಲ.
ಒಂದು ಹಂತದಲ್ಲಿ ವಿಮಾನ ಗೇಟ್‌ಗಳ ಮುಂದೆ ‘Gate Closed’, ‘Final Call‘, ‘Check‑in Closed’ ಎಂದು ತೋರಿಸಲಾರಂಭಿಸಿತು. ಪ್ರತಿ 15 ನಿಮಿಷಗಳಿಗೊಮ್ಮೆ ‘ವಿಳಂಬ’ ಸಂದೇಶ ನೀಡಲಾಗುತ್ತಿತ್ತು. ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್‌ಗಳು ನಮಗೆ ಸಿಗುತ್ತಿಲ್ಲ, ಪ್ರಯಾಣ ರದ್ದಾಗಿದ್ದಕ್ಕೆ ಹಣ ವಾಪಾಸಾತಿ ಇಲ್ಲ. ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು.
ಡಿಸೆಂಬರ್‌ನ ಮೈ ಕೊರೆವ ಚಳಿ. ನನ್ನ ಮಾಸಿಕ ಋತುಸ್ರಾವವೂ ಆರಂಭವಾಗಿತ್ತು. ಫೋನ್ ಬ್ಯಾಟರಿ ಇಲ್ಲದೆ ಮೌನಕ್ಕೆ ಜಾರಿತು. ಪ್ಯಾಡ್ ಖರೀದಿಸೋಣವೆಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲೂ ಮೊಬೈಲ್ ನೆರವಿಗೆ ಬಾರಲಿಲ್ಲ. ಮೊಬೈಲ್ ಚಾರ್ಜ್ ಮಾಡೋಣವೆಂದರೆ ಬರೋಬ್ಬರಿ 500 ಮೀಟರ್ ಉದ್ದದ ಕ್ಯೂ ಇತ್ತು.
ವೈದ್ಯಕೀಯ ನೆರವು ಸಿಗದೆ ಇಳಿ ವಯಸ್ಸಿನ ವೃದ್ಧರೊಬ್ಬರು ಗಳಗಳನೆ ಅತ್ತುಬಿಟ್ಟರು. ವಿಮಾನ ನಿಲ್ದಾಣದಲ್ಲಿ ರಾತ್ರಿ 8ರ ನಂತರ ಆಹಾರ ಸಿಗದ ಕಾರಣ ಪುಟ್ಟ ತಾಯಿಯೊಬ್ಬರು ಹಸಿವಿನಿಂದ ಪರದಾಡಿದರು. ಮೈಕೊರೆವ ಚಳಿಯಿಂದ ಪಾರಾಗಲು ಹಲವರು ಶೌಚಾಲಯದಲ್ಲಿ ಆಶ್ರಯ ಪಡೆದಿದ್ದರು. ಒಳಹೋಗಲು ಪರದಾಡುತ್ತಿದ್ದ ಅಂಗವಿಕಲ ಬಾಲಕಿಯೊಬ್ಬಳಿಗೆ ನೆರವಾದೆ ಎಂಬ ಸಮಾಧಾನ ನನ್ನದು.
ನೂರಾರು ಪ್ರಯಾಣಿಕರು ರನ್‌ವೇ ಕಡೆಗೆ ಓಡಿದರು. ಕೆಲವರು ಕೂಗಿದರು, ಕೆಲವರು ಅಳುತ್ತಿದ್ದರು, ಕೆಲವರು ವಿಮಾನ ನಿಲ್ದಾಣದ ಘೋಷಣೆ ವ್ಯವಸ್ಥೆಯನ್ನೇ ಬಳಸಿಕೊಂಡು ಭಾವುಕರಾಗಿ ಮಾತನಾಡಿದರು. ನಾನು ನನ್ನ ಮಗುವನ್ನು ತಲುಪುವ ಆಶಯದೊಂದಿಗೆ ಮನೆಯಲ್ಲಿ ನನಗಾಗಿ ಕಾತುರದಿಂದ ಕಾಯುತ್ತಾ ಅಲ್ಲೇ ನಿಂತಿದ್ದೆ.
ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಇಂಡಿಗೊ, ಟಿಕೆಟ್ ವಿತರಿಸಿದ್ದಕ್ಕಿಂತಲೂ ಕಡಿಮೆ ವಿಮಾನಗಳನ್ನು ಹೊಂದಿದೆ. ಬುಕ್ಕಿಂಗ್‌ಗಳು ವಿಮಾನಗಳ ಸಂಖ್ಯೆಗಳನ್ನೂ ಮೀರಿಸಿವೆ. ಮಿತಿಗಿಂತಲೂ ಹೆಚ್ಚು ಟಿಕೆಟ್ ಕಾಯ್ದಿರಿಸುವುದು ವಾಡಿಕೆ ಎಂಬಂತಾಗಿದೆ. ವಿಮಾನಯಾನ ಸಿಬ್ಬಂದಿಯಿಂದ ಹಿಡಿದು ಸಹ ಪೈಲೆಟ್‌ಗಳವರೆಗೂ ಕಾರ್ಯ ಒತ್ತಡ ಮತ್ತು ವೇತನ ಅಸಮಾನತೆ ವಿರುದ್ಧ ಪ್ರತಿಭಟಿಸುತ್ತಲೇ ಇದ್ದಾರೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿಗಳು ಈ ಗೊಂದಲ ಪರಿಹರಿಸುವ ಬದಲು, ಅದನ್ನು ಇನ್ನಷ್ಟು ತೀವ್ರಗೊಳಿಸಿತು. ನಾವು ನೋಡಿದ್ದು ಒಂದು ಘಟನೆಯಷ್ಟೇ ಅಲ್ಲ, ಬದಲಾಗಿ ವ್ಯವಸ್ಥಿತ ವೈಫಲ್ಯ.
ಇದು ದೆಹಲಿ ಮಾತ್ರವಲ್ಲ, ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕಳೆದ ಎರಡು ದಿನಗಳ ಸ್ಥಿತಿ. ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಹೇಳುವಂತೆ, ‘ಮಾಹಿತಿ ವಿಫಲವಾದಾಗ ಮಾರುಕಟ್ಟೆಗಳು ವಿಫಲಗೊಳ್ಳುತ್ತವೆ’ ಎಂದಿದ್ದಾರೆ.
ವಿಮಾನಗಳು ಸಾಮೂಹಿಕವಾಗಿ ರದ್ದಾದಲ್ಲಿ ಕಡ್ಡಾಯವಾಗಿ ಪರಿಹಾರ ಮತ್ತು ವಸತಿ ಸೌಕರ್ಯ ನೀಡಬೇಕು
ತಪ್ಪು ಮಾಹಿತಿಗಾಗಿ ದಂಡ ವಿಧಿಸಬೇಕು ಮತ್ತು ಸಂವಹನ ಪಾರದರ್ಶಕವಾಗಿರಬೇಕು
ತುರ್ತು ಸಾಮಗ್ರಿಗಳಲ್ಲಿ ಪ್ಯಾಡ್, ಡೈಪರ್, ಔಷಧಿ ಹಾಗೂ ಬೆಚ್ಚಗಿನ ಬಟ್ಟೆಗಳು ಇರಬೇಕು
ಎಲ್ಲಾ ದ್ವಾರಗಳಲ್ಲಿ ಪೋರ್ಟಬಲ್ ಚಾರ್ಜಿಂಗ್ ಹಬ್‌ಗಳನ್ನು ಇಡಬೇಕು
ವಿಮಾನಯಾನ ಸಂಸ್ಥೆಗಳ ಮುಷ್ಕರ ಮತ್ತು ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಶಿಷ್ಟಾಚಾರ ಜಾರಿಗೆ ತರಬೇಕು
ಇಂಡಿಗೋ ಸಿಇಒ ಮತ್ತು ಸರ್ಕಾರಿ ನಿಯಂತ್ರಕರು ಇದನ್ನು ಓದುತ್ತಿದ್ದಂತೆ, ಭಾರತದ ಮಧ್ಯಮ ವರ್ಗಕ್ಕೆ ವಿಮಾನ ಪ್ರಯಾಣವು ಇನ್ನು ಮುಂದೆ ಐಷಾರಾಮಿ ಅಲ್ಲ - ಅದು ಅವಶ್ಯಕತೆಯಾಗಿದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು. ಕಾರ್ಪೊರೇಟ್ ವಿವಾದಗಳಲ್ಲಿ ಅಥವಾ ಕಾರ್ಯಾಚರಣೆಯ ನಿರ್ಲಕ್ಷ್ಯದಲ್ಲಿ ಪ್ರಯಾಣಿಕರ ಘನತೆಯು ಮೇಲಾಧಾರ ಹಾನಿಯಾಗಿರಬಾರದು.
ಇದು ನನ್ನ ಕಥೆ - ಆದರೆ ಇದು ಲಕ್ಷಾಂತರ ಜನರ ಕಥೆಯೂ ಹೌದು. ಇದು ಕೇಳಲು, ಅನುಭವಿಸಲು ಮತ್ತು ಕಾರ್ಯನಿರ್ವಹಿಸಲು ಅರ್ಹವಾಗಿದೆ. ಬ್ಯಾಟರಿ ಚಾರ್ಜಿಂಗ್, ಮನಸ್ಸಿನ ಉಪಸ್ಥಿತಿ ಮತ್ತು ಸಮತೋಲನದ ಅಗತ್ಯವಿರುವುದರಿಂದ ಫೋಟೋಗಳನ್ನು ತೆಗೆದುಕೊಳ್ಳಲಾಗಿಲ್ಲ.
ಇಂದಿನ ಯುಗದಲ್ಲಿ ವಿಮಾನ ಪ್ರಯಾಣ ಎಂಬುದು ಮಧ್ಯಮ ವರ್ಗದವರಿಗೆ ವಿಲಾಸಿಯಲ್ಲ. ಬದಲಿಗೆ ಬದುಕಿನ ಭಾಗವಾಗಿದೆ. ಹೀಗಾಗಿ ಇದು ನನ್ನ ಕಥೆಯಷ್ಟೇ ಅಲ್ಲ. ಇದು ನನ್ನಂಥ ಸಾವಿರಾರು ಪ್ರಯಾಣಿಕರ ನೋವಿನ ಕಥೆ.
(ಇಂಡಿಗೊ ಪ್ರಯಾಣಿಕರ ಪ್ರತ್ಯಕ್ಷ ಅನುಭವ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.