ADVERTISEMENT

Indigo Crisis | ಗೋವಾದಲ್ಲಿ ನಿಗದಿಯಾಗಿದ್ದ ಮದುವೆ ಮುಂದೂಡಿಕೆ: ಉದ್ಯಮಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 9:45 IST
Last Updated 5 ಡಿಸೆಂಬರ್ 2025, 9:45 IST
ಇಂಡಿಗೊ ವಿಮಾನ (ಸಾಂದರ್ಭಿಕ ಚಿತ್ರ)
ಇಂಡಿಗೊ ವಿಮಾನ (ಸಾಂದರ್ಭಿಕ ಚಿತ್ರ)   

ದೇಶದ ಅತಿ ದೊಡ್ಡ ವಿಮಾನಯಾನ ಕಂಪನಿ ‘ಇಂಡಿಗೊ’ ವಿಮಾನದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಶುಕ್ರವಾರ ಸುಮಾರು 500 ವಿಮಾನಗಳ ಕಾರ್ಯಾಚರಣೆ ರದ್ದಾಗಿದೆ. ನಾಲ್ಕು ದಿನಗಳಿಂದ ಹೀಗೆ ನಡೆಯುತ್ತಿದ್ದು ಪ್ರಯಾಣಿಕರು ಅಸಹಾಯಕರಾಗಿದ್ದಾರೆ. ಆಕ್ರೋಶಗೊಂಡ ಕೆಲವರು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೋಪ ತೋರ್ಪಡಿಸುತ್ತಿದ್ದಾರೆ. ಅಗತ್ಯ ಕಾರಣಗಳಿಗೆ ಪ್ರಯಾಣಿಸಬೇಕಾದವರು ಇದರಿಂದ ಭಾರಿ ತೊಂದರೆಗೀಡಾಗಿದ್ದಾರೆ.

‘ಇಂಡಿಗೊ ಸಮಸ್ಯೆಯಿಂದಾಗಿ ದೂರದ ಸಂಬಂಧಿಯೊಬ್ಬರ ಮದುವೆ ಮುಂದೂಡಲಾಗಿದೆ’ ಎಂದು ಫಿಂಟ್ರೆಕ್ ಕ್ಯಾಪಿಟಲ್‌ನ ಸಂಸ್ಥಾಪಕ ಅಮಿತ್ ಕುಮಾರ್ ಗುಪ್ತಾ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

48 ಅತಿಥಿಗಳು ಒಂದೇ ಇಂಡಿಗೊ ವಿಮಾನದಲ್ಲಿ ದೆಹಲಿಯಿಂದ ಗೋವಾಗೆ ತೆರಳುತ್ತಿದ್ದರು. ಆದರೆ ಆ ವಿಮಾನ 4 ಗಂಟೆ ತಡವಾಗಲಿದೆ ಎಂದು ಹೇಳಲಾಗಿತ್ತು, ಬಳಿಕ ಅದು ರದ್ದುಗೊಂಡಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದು ಪ್ರವಾಸ ಋತುವಾಗಿದ್ದರಿಂದ ಬುಕ್ಕಿಂಗ್‌ ಹಣ ಹಿಂದಿರುಗಿಸದೆ ಮುಂದಿನ 24 ತಿಂಗಳು ಮಾನ್ಯತೆ ಹೊಂದಿರುವ ಕ್ರೆಡಿಟ್ ನೋಟ್ (ಜಮಾ ಟಿಪ್ಪಣಿ) ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಗೋವಾದ ಎಲ್ಲಾ ಸ್ಥಳಗಳು ತುಂಬಿದ್ದರಿಂದ ಮದುವೆಯನ್ನು ಮುಂದಿನ ತಿಂಗಳು ಎನ್‌ಸಿಆರ್‌ನಲ್ಲಿ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

‘ನನ್ನ ಸಂಬಂಧಿಯೊಬ್ಬರು ಮದುವೆ ಕಾರ್ಯಕ್ರಮಕ್ಕೆ ಡಿಸೆಂಬರ್ 4–7ರವರೆಗೆ ನಾಲ್ಕು ರಾತ್ರಿಗೆ ಪಂಚತಾರಾ ಹೋಟೆಲ್ ಬುಕ್ ಮಾಡಲಾಗಿತ್ತು. ಅಲ್ಲಿ ಪ್ರತಿ ರಾತ್ರಿಗೆ ₹ 35 ಸಾವಿರ ದರ ಇದೆ. ಜೊತೆಗೆ ಈವೆಂಟ್ ಮ್ಯಾನೇಜ್ಮೆಂಟ್ ವೆಚ್ಚ ಸುಮಾರು ₹16.4– ₹21.4 ಲಕ್ಷ. ಒಟ್ಟು ₹ 16.4–₹ 21.4 ವೆಚ್ಚ ಅಂದಾಜು ಮಾಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.

ಈ ಪರಿಸ್ಥಿತಿ ಅಚ್ಚರಿ ತಂದಿದೆ ಎಂದು ಹೇಳಿರುವ ಅವರು, ಇಂಡಿಗೊ ಈ ಸಮಸ್ಯೆಯ ಬಗ್ಗೆ ಮೊದಲೇ ಅರಿತುಕೊಂಡು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಈ ಬಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಡೆಸುವ ತನಿಖೆ ನಿಷ್ಪ್ರಯೋಜಕ ಎಂದು ಅವರು ಕಿಡಿ ಕಾರಿದ್ದಾರೆ. ಪ್ರಯಾಣಿಕರಿಗೆ ನಷ್ಟವಾದ ಸಮಯ, ಹಣ ಹಾಗೂ ಶಕ್ತಿಯನ್ನು ತಡೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಸರ್ಕಾರ ಶೀಘ್ರವೇ ಮಧ್ಯಪ್ರವೇಶ ಮಾಡಿ ಇಂಡಿಗೊ ಆಡಳಿತ ಮಂಡಳಿಗೆ ದಂಡ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಸಂಸ್ಥೆಯ ಆಡಳಿತವನ್ನು ಸ್ವತಂತ್ರ ವೃತ್ತಿಪರ ತಂಡಕ್ಕೆ ಹಸ್ತಾಂತರಿಸಬೇಕು. ಈಗಿನ ಆಡಳಿತ ಮಂಡಳಿ ಪ್ರಯಾಣದ ಅನುಭವವನ್ನೇ ಹಾಳು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಯಾವುದೇ ಪೂರ್ವ ಯೋಜನೆ ಇಲ್ಲದೆ ತಕ್ಷಣದ ಪ್ರಯಾಣ ಮಾಡುವವರಿಗೆ ಇದು ಸಮಸ್ಯೆಯಾಗಲಿದೆ. ಪ್ರಯಾಣ ದರ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.