ಇಂಡಿಗೊ ವಿಮಾನಗಳು
–ಪಿಟಿಐ ಚಿತ್ರ
ಗುರುಗ್ರಾಮ: ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತನ್ನ ಮೂವರು ಹಿರಿಯ ಸಹೋದ್ಯೋಗಿಗಳ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪಗಳನ್ನು ವಿಮಾನಯಾನ ಸಂಸ್ಥೆ ಅಲ್ಲಗಳೆದಿದೆ.
ಸಿಬ್ಬಂದಿ ಎ. ಶರಣ್ (35) ಎಂಬುವರು ಈ ಸಂಬಂಧ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ‘ಶೂನ್ಯ ಎಫ್‌ಐಆರ್’ ದಾಖಲಿಸಿರುವ ಬೆಂಗಳೂರು ಪೊಲೀಸರು, ಘಟನೆ ನಡೆದಿರುವ ಪ್ರದೇಶವಾದ ಗುರುಗ್ರಾಮಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಅದನ್ನು ಆಧರಿಸಿ ಗುರುಗ್ರಾಮದ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ವಿವರ: ‘ಏಪ್ರಿಲ್ 28ರಂದು ನಡೆದ ಸಭೆಯಲ್ಲಿ ಹಿರಿಯ ಸಿಬ್ಬಂದಿಗಳಾದ ತಪಸ್ ದೆ, ಮನಿಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟಿಲ್ ಅವರು ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ದೌರ್ಜನ್ಯ ಎಸಗಿ, ಬೆದರಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಸಂಸ್ಥೆಯಲ್ಲಿ ಹಿಂದೆಯೂ ನಾನು ಈ ರೀತಿಯ ಶೋಷಣೆ ಮತ್ತು ತಾರತಮ್ಯವನ್ನು ಎದುರಿಸಿದ್ದೇನೆ. ಯಾವುದೇ ತಪ್ಪು ಮಾಡದೇ ಇದ್ದರೂ, ಆಧಾರವಿಲ್ಲದೆ ನನಗೆ ಹಲವು ಬಾರಿ ಎಚ್ಚರಿಕೆಯ ಪತ್ರಗಳನ್ನು ನೀಡಲಾಗಿದೆ. ಕಾರಣವಿಲ್ಲದೆ ನನ್ನ 'ಅನಾರೋಗ್ಯ ರಜೆಗಳನ್ನು ಮೊಟಕುಗೊಳಿಸಿ, ವೇತನ ಕಡಿತಗೊಳಿಸಲಾಗಿದೆ. ಕೆಲ ಸೌಲಭ್ಯಗಳನ್ನು ಸಹ ಕಡಿತಗೊಳಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಅಷ್ಟೇ ಅಲ್ಲದೆ ರಾಜೀನಾಮೆ ನೀಡುವಂತೆಯೂ ಈ ಮೂವರು ಹಿರಿಯ ಸಿಬ್ಬಂದಿ ನನ್ನ ಮೇಲೆ ಒತ್ತಡ ಹೇರಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 28ರಂದು ನಡೆದ ಸಭೆಯಲ್ಲಿ ಏನೇನಾಯಿತು ಎಂಬುದರ ಕುರಿತು ಇಂಡಿಗೊ ಸಿಇಒ ಮತ್ತು ಸಂಸ್ಥೆಯ ನೈತಿಕ ಸಮಿತಿಗೂ ದೂರು ನೀಡಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಅವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪ ನಿರಾಕರಣೆ: ತನ್ನ ಸಿಬ್ಬಂದಿ ಮಾಡಿರುವ ಆರೋಪಗಳು ತಳ್ಳಿಹಾಕಿರುವ ಇಂಡಿಗೊ ವಿಮಾನಯಾನ ಸಂಸ್ಥೆಯು, ಇವು ಆಧಾರರಹಿತ ಆರೋಪ ಎಂದು ಹೇಳಿದೆ. ಅಲ್ಲದೆ ಪ್ರಕರಣದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅದು ತಿಳಿಸಿದೆ.
ಇಂಡಿಗೊ ಸಂಸ್ಥೆಯು ‘ಶೂನ್ಯ ಸಹಿಷ್ಣು ನೀತಿ’ ಅಳವಡಿಸಿಕೊಂಡಿದ್ದು, ತಾರತಮ್ಯ, ಶೋಷಣೆ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.