
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರ ಮತ್ತು ವಾಂತಿಯಿಂದ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದ್ದಾರೆ.
ಅತಿಸಾರದಿಂದಾಗಿ ಭಗೀರಥಪುರದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಆದರೆ ನನಗೆ ಇರುವ ಮಾಹಿತಿ ಪ್ರಕಾರ ಅತಿಸಾರ ಮತ್ತು ವಾಂತಿಯಿಂದ ಬಳಲುತ್ತಿರುವ ಇನ್ನೂ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೂ ಮೃತಪಟ್ಟಿದ್ದಾರೆ ಎಂದು ಮೇಯರ್ ಭಾರ್ಗವ ತಿಳಿಸಿದ್ದಾರೆ.
ಪ್ರಾಥಮಿಕ ಮೂಲಗಳ ಪ್ರಕಾರ, ಕುಡಿಯುವ ನೀರಿನ ಪೈಪ್‌ಲೈನ್‌ಗೆ ಒಳಚರಂಡಿ ನೀರು ಸೇರಿದ್ದರಿಂದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಂ ವರ್ಮಾ ತಿಳಿಸಿದ್ದಾರೆ.
ಅತಿಸಾರದಿಂದ ಬಳಲುತ್ತಿರುವ 149 ಜನರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಭಗೀರಥಪುರ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ 6 ಮಹಿಳೆಯರು ಸೇರಿದಂತೆ ಕನಿಷ್ಠ 8 ಜನ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಯಾದವ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ರೋಗಿಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಸಿಎಂ ಸೂಚನೆ ಮೇರೆಗೆ ಭಾಗೀರಥಪುರದ ಪುರಸಭೆಯ ವಲಯ ಅಧಿಕಾರಿ ಮತ್ತು ಸಹಾಯಕ ಎಂಜಿನಿಯರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ . ಘಟನೆಯ ತನಿಖೆಗಾಗಿ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ತನ್ನ ನಿರ್ಲಕ್ಷ್ಯವನ್ನು ಮುಚ್ಚಿಹಾಕಲು ಸರ್ಕಾರ ಸಾವಿನ ನೈಜ ಸಂಖ್ಯೆಯನ್ನು ಮರೆ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.