ಚೆನ್ನೈ: ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್ ದಿನದಂದು (ಜನವರಿ 15 ಮತ್ತು 16) ನಿಗದಿಯಾಗಿರುವ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಕೇಂದ್ರ ಶಿಕ್ಷಣ ಸಚಿವರಿಗೆ ಡಿಎಂಕೆ ಸಂಸದೆ ಕನಿಮೊಳಿ ಅವರು ಪತ್ರ ಬರೆದಿದ್ದಾರೆ.
‘ಪೊಂಗಲ್ ಹಬ್ಬದಂದು ಯುಜಿಸಿ, ಸಿಎ ಪರೀಕ್ಷೆಗಳನ್ನು ನಿಗದಿಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಏಕೆಂದರೆ ಇದು ತಮಿಳುನಾಡಿನ ಜನರ ಭಾವನೆಗಳ ಬಗ್ಗೆ ಬಿಜೆಪಿಗರು ಹೊಂದಿರುವ ಅಸೂಕ್ಷ್ಮತೆಯನ್ನು ತೋರಿಸುತ್ತದೆ’ ಎಂದು ಕನಿಮೊಳಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪೊಂಗಲ್ ಕೇವಲ ಹಬ್ಬವಲ್ಲ. ಇದು ತಮಿಳುನಾಡಿನ ಹೆಮ್ಮೆ ಮತ್ತು ಗುರುತಿನ ಆಚರಣೆಯಾಗಿದೆ. ಇದು ಕೇವಲ ನಿರ್ಲಕ್ಷ್ಯವಲ್ಲ. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಉದ್ದೇಶಪೂರ್ವಕ ಮಾಡಿರುವ ಅವಮಾನ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ರಾಜ್ಯ (ತಮಿಳುನಾಡು) ಮತ್ತು ಜನರ ಬಗ್ಗೆ ಮತ್ತೊಮ್ಮೆ ತನ್ನ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ’ ಎಂದು ಕನಿಮೊಳಿ ಕಿಡಿಕಾರಿದ್ದಾರೆ.
‘ತಮಿಳುನಾಡಿನ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುವುದು ಮತ್ತು ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಮತ್ತು ಸಂಪ್ರದಾಯದ ಆಯ್ಕೆ ಕುರಿತು ಮುಕ್ತ ಅವಕಾಶವನ್ನು ಖಚಿತಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೊಂಗಲ್ ದಿನದಂದು ನಿಗದಿಯಾಗಿರುವ ಪರೀಕ್ಷೆಗಳನ್ನು ತಕ್ಷಣವೇ ಮುಂದೂಡುವಂತೆ ಒತ್ತಾಯಿಸುತ್ತೇನೆ’ ಎಂದು ಕನಿಮೊಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.