ADVERTISEMENT

ಭಾರತದಲ್ಲಿ ಐಫೋನ್‌ ತಯಾರಿಸಬೇಡಿ: ಟ್ರಂಪ್‌ ಮನವಿ - ಭಾರತದಲ್ಲಿ ತಲ್ಲಣ

ಆ್ಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ಗೆ ಟ್ರಂಪ್‌ ಮನವಿ l ಭಾರತದಲ್ಲಿ ತಲ್ಲಣ

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:30 IST
Last Updated 16 ಮೇ 2025, 0:30 IST
   

ನವದೆಹಲಿ/ದೋಹಾ: ‘ನೀವು ಭಾರತದಲ್ಲಿ ಐಫೋನ್‌ ತಯಾರಿಸಬೇಡಿ. ಅಲ್ಲಿ ತಯಾರಿಸುವುದು ನನಗೆ ಇಷ್ಟವಿಲ್ಲ. ನೀವು ನಮ್ಮ ದೇಶಕ್ಕೆ ಬನ್ನಿ ಎಂದು ಆ್ಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಅವರಿಗೆ ಹೇಳಿದ್ದೇನೆ. ಅವರು ನಮ್ಮ ದೇಶದಲ್ಲಿ ಐಫೋನ್‌ ತಯಾರಿಕೆ ಮಾಡಲು ಒಪ್ಪಿಕೊಂಡಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೋಹಾದಲ್ಲಿ ಗುರುವಾರ ಹೇಳಿದ್ದಾರೆ.

ಇದು ಭಾರತದಲ್ಲಿ ತಲ್ಲಣ ಸೃಷ್ಟಿಸಿದೆ. ಭಾರತ ಸರ್ಕಾರದ ಅಧಿಕಾರಿಗಳು ಆ್ಯಪಲ್‌ ಕಂಪನಿಯವರ ಬಳಿ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಭಾರತದಲ್ಲಿಯೇ ತಯಾರಿಸಲಾದ ಐಫೋನ್‌ಗಳನ್ನು ದಾಖಲೆ ಮಟ್ಟದಲ್ಲಿ ಇದೇ ಮಾರ್ಚ್‌ನಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗಿದೆ. ‘ಅಮೆರಿಕದಲ್ಲಿ ಮಾರಾಟ ಮಾಡುವ ಐಫೋನ್‌ಗಳನ್ನು ಭಾರತದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಕೆ ಮಾಡಲಾಗುವುದು’ ಎಂದು ಟಿಮ್‌ ಕುಕ್‌ ಅವರು ಇದೇ ತಿಂಗಳಲ್ಲಿ ಘೋಷಿಸಿದ್ದರು.

ADVERTISEMENT

ಮುಖ್ಯಾಂಶಗಳು:

*4 ಕೋಟಿ;ಭಾರತದಲ್ಲಿ ಪ್ರತಿ ವರ್ಷ ತಯಾರಾಗುವ ಐಫೋನ್‌ಗಳ ಸಂಖ್ಯೆ (ಇದು ಆ್ಯಪಲ್‌ ಕಂಪನಿಯ ಒಟ್ಟು ಐಫೋನ್‌ ತಯಾರಿಕೆಯಲ್ಲಿ ಶೇ 15ರಷ್ಟಾಗುತ್ತದೆ)

*₹1.5 ಲಕ್ಷ ಕೋಟಿ;2024–25ನೇ ಆರ್ಥಿಕ ವರ್ಷದಲ್ಲಿ ಭಾರತದ ರಫ್ತು ಮಾಡಿದ ಐಫೋನ್‌ಗಳ ಮೌಲ್ಯ

*₹17 ಸಾವಿರ ಕೋಟಿ;2025ರ ಮಾರ್ಚ್‌ ಒಂದೇ ತಿಂಗಳಲ್ಲಿ ಭಾರತವು ರಫ್ತು ಮಾಡಿದ ಐಫೋನ್‌ಗಳ ಮೌಲ್ಯ

*2 ಲಕ್ಷ;ಆ್ಯಪಲ್‌ ಕಂಪನಿಯು ಭಾರತದಲ್ಲಿ ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ

ಅವರದ್ದು ಅವರು ನೋಡಿಕೊಳ್ಳುತ್ತಾರೆ’

ಟಿಮ್‌, ನೀವು ನನ್ನ ಸ್ನೇಹಿತ. ನೀವು ಅಮೆರಿಕದಲ್ಲಿ 500 ಬಿಲಿಯನ್‌ ಡಾಲರ್‌ನಷ್ಟು (ಸುಮಾರು ₹43 ಲಕ್ಷ ಕೋಟಿ) ಹೂಡಿಕೆ ಮಾಡಲಿದ್ದೀರಿ. ಆದರೆ, ನಾನು ಈಗಷ್ಟೇ ಕೇಳಲ್ಪಟ್ಟೆ. ನೀವು ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಲಿದ್ದೀರಿ ಎಂದು. ಭಾರತದಲ್ಲಿ ನೀವು ಐಫೋನ್‌ ತಯಾರಿಕೆ ಮಾಡುವುದು ನನಗೆ ಇಷ್ಟವಿಲ್ಲ. ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಅಮೆರಿಕದಲ್ಲಿ ಮಾರಾಟವಾಗುವುದು ನಿಲ್ಲಬೇಕು. ಅವರದ್ದು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಅದು ಭಾರಿ ಸುಂಕ ವಿಧಿಸುವ ದೇಶ. ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಚೀನಾದವರು ಇಷ್ಟು ವರ್ಷಗಳಲ್ಲಿ ನಿಮಗೆ ಮಾಡಿಕೊಟ್ಟ ಎಲ್ಲ ಅನುಕೂಲಗಳನ್ನೂ ನಾವು ಮಾಡಿಕೊಡುತ್ತೇವೆ. ನೀವು ನಮ್ಮ ದೇಶದಲ್ಲಿ ಐಫೋನ್‌ ತಯಾರಿಕೆ ಮಾಡಿ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಶೂನ್ಯ ಸುಂಕಕ್ಕೆ ಭಾರತ ಒಪ್ಪಿಗೆ: ಟ್ರಂಪ್

‘‌ಅಮೆರಿಕದಿಂದ ಪೂರೈಕೆಯಾಗುವ ಬಹುತೇಕ ಸರಕುಗಳಿಗೆ ಸುಂಕ ವಿನಾಯಿತಿ ನೀಡುವುದಾಗಿ ಭಾರತವು ಹೇಳಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ದೋಹಾದಲ್ಲಿ ಗುರುವಾರ ನಡೆದ ವ್ಯಾ‍ಪಾರ ಕುರಿತ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ‘ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ಅವರು (ಭಾರತ) ನಮ್ಮ ಎಲ್ಲಾ ಸರಕುಗಳಿಗೂ ಸುಂಕ ವಿನಾಯಿತಿ ನೀಡುವುದಕ್ಕೆ ಒಪ್ಪಿಗೆ ನೀಡಿದ್ದಾರೆ, ಆದರೆ ಅಧಿಕೃತವಾಗಿ ಈವರೆಗೆ ಏನನ್ನೂ ಘೋಷಿಸಿಲ್ಲ. ಇಡೀ ವಿಶ್ವದಲ್ಲಿಯೇ ಭಾರತವು ಅಮೆರಿಕದ ಸರಕುಗಳ ಮೇಲೆ ಅತಿಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದೆ. ಸದ್ಯ ಈಗ ಸುಂಕ ಹಿಂಪಡೆಯುವುದಾಗಿ ತಿಳಿಸಿದೆ‌’ ಎಂದು ಹೇಳಿದರು.

ಅಮೆರಿಕವು ಭಾರತದ ಮೇಲೆ ಶೇ 26ರಷ್ಟು ಪ್ರತಿ ಸುಂಕ ವಿಧಿಸಿದ್ದು, ಇದರ ಜಾರಿಗೆ ಜುಲೈ 9ರವರೆಗೆ ವಿರಾಮ ನೀಡಲಾಗಿದೆ.

ಯೋಜನೆ ಹಿಂಪಡೆಯುವುದಿಲ್ಲ: ಆ್ಯಪಲ್‌ ಭರವಸೆ

‘ಭಾರತದಲ್ಲಿ ತಾವು ಹೂಡಿಕೆ ಮಾಡಲು ಉದ್ದೇಶಿ ಸಿರುವಂತೆಯೇ ಮುಂದುವರಿಯುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಉತ್ಪನ್ನಗಳಿಗೆ ಭಾರತವು ಎಂದಿನಂತೆ ದೊಡ್ಡ ತಯಾರಿಕಾ ಕೇಂದ್ರವೇ ಆಗಿರಲಿದೆ’ ಎಂದು ಆ್ಯಪಲ್‌ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ’ ಎಂದು ಮೂಲಗಳು ಹೇಳಿವೆ.

ಟ್ರಂಪ್‌ ಅವರ ಹೇಳಿಕೆ ಬಹಿರಂಗವಾಗುತ್ತಿ ದ್ದಂತೆಯೇ ಕೇಂದ್ರ ಸರ್ಕಾರದ ಅಧಿಕಾರಿಗಳು ಅಮೆರಿಕದಲ್ಲಿ ಇರುವ ಆ್ಯಪಲ್‌ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ‘ಈ ಬಗ್ಗೆ ಪ್ರತಿಕ್ರಿಯಿಸಲು ಆ್ಯಪಲ್‌ ಕಂಪೆನಿಗೆ ಇ–ಮೇಲ್‌ ಕಳುಹಿಸಿದರೂ ಯಾವುದೇ ಉತ್ತರ ಬರಲಿಲ್ಲ’ ಎಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿದೆ.

ಫಾಕ್ಸ್‌ಕಾನ್‌ ಮತ್ತು ಟಾಟಾ ಸಂಸ್ಥೆಯು ಭಾರತದಲ್ಲಿ ಐಫೋನ್‌ ತಯಾರಿಕೆಯಲ್ಲಿ ತೊಡಗಿವೆ. ಐಫೋನ್‌ಗಳ ತಯಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಈ ಕಂಪನಿಗಳು ಹೊಸ ಹೊಸ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ. ಫಾಕ್ಸ್‌ಕಾನ್‌ ಕಂಪನಿಯು ತೆಲಂಗಾಣದಲ್ಲಿ ಆ್ಯಪಲ್‌ ಏರ್‌ಪೋಡ್‌ಗಳನ್ನು ತಯಾರಿಸಲು ಆರಂಭಿಸಿದೆ.

ಅಮೆರಿಕದ ಬಹುತೇಕ ಸರಕುಗಳಿಗೆ ಶೂನ್ಯ ಸುಂಕ ನೀತಿ ಅನುಸರಿಸಲು ಭಾರತ ಮುಂದಾಗಿದೆ ಎಂಬ ಟ್ರಂಪ್‌ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಹಿಸುವುದು ಏಕೆ?
ಕಾಂಗ್ರೆಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.