ADVERTISEMENT

ದೆಹಲಿಗೆ ಬಂದಾಗೆಲ್ಲ ‘ಗಾಂಧಿ’ ಕುಟುಂಬವನ್ನು ಭೇಟಿಯಾಗುವುದು ಕಡ್ಡಾಯವೇನು? ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 3:08 IST
Last Updated 25 ನವೆಂಬರ್ 2021, 3:08 IST
ಜುಲೈನಲ್ಲಿ ದೆಹಲಿಗೆ ಭೇಟಿ ನೀಡಿದ್ದಾಗ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ
ಜುಲೈನಲ್ಲಿ ದೆಹಲಿಗೆ ಭೇಟಿ ನೀಡಿದ್ದಾಗ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ    

ನವದೆಹಲಿ: ದೆಹಲಿಯಲ್ಲಿದ್ದೂ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ದೆಹಲಿ ಪ್ರವಾಸ ಕೈಗೊಂಡಿದ್ದ ಮಮತಾ ಬ್ಯಾನರ್ಜಿ ಅವರು ಗುರುವಾರ ಪಶ್ಚಿಮ ಬಂಗಾಳಕ್ಕೆ ಹಿಂದಿರುಗುತ್ತಿದ್ದಾರೆ. ಹಿಂದಿರುಗುವುದಕ್ಕೂ ಮೊದಲು ಕಾಂಗ್ರೆಸ್‌ ನಾಯಕಿಯನ್ನು ಭೇಟಿ ಮಾಡುವಿರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ತಾಳ್ಮೆ ಕಳೆದುಕೊಂಡರು.

‘ಏಕೆ. ಪ್ರತಿಬಾರಿ ದೆಹಲಿಗೆ ಬಂದಾಗ ಅವರನ್ನು ಭೇಟಿಯಾಗುವುದು ಕಡ್ಡಾಯವೇನು?’ ಎಂದು ಮಮತಾ ಮಾಧ್ಯಮಗಳನ್ನು ಪ್ರಶ್ನೆ ಮಾಡಿದರು. ಅಲ್ಲದೆ, ‘ಅದೇನು ಸಾಂವಿಧಾನಿಕ ಪ್ರಕ್ರಿಯೆಯೇ’ ಎಂದೂ ಕೇಳಿದರು.

ADVERTISEMENT

ನಂತರ ಮಾತನಾಡಿದ ಅವರು, ‘ಡಿಸೆಂಬರ್ 1 ರಂದು ಮುಂಬೈಗೆ ತೆರಳುತ್ತಿದ್ದು, ಅಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ,‘ ಎಂದು ಹೇಳಿದರು.

ಜುಲೈನಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮಮತಾ ಅವರು ಕಾಂಗ್ರೆಸ್‌ನ ವರಿಷ್ಠರನ್ನು ಭೇಟಿಯಾಗಿ ತೆರಳಿದ್ದರು. ಸೋಮವಾರ ದೆಹಲಿಗೆ ಬಂದಿದ್ದ ಮಮತಾ ಮಂಗಳವಾರ ಕಾಂಗ್ರೆಸ್‌ನ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿದ್ದವು. ಆದರೆ, ಮಂಗಳವಾರ ಮತ್ತು ಬುಧವಾರ ಇಬ್ಬರ ನಡುವೆ ಭೇಟಿ ನಡೆಯಲಿಲ್ಲ.

‘ನಾನು ಅವರನ್ನು ಭೇಟಿಯಾಗಲು ಸಮಯ ಕೇಳಿಲ್ಲ. ಅವರು ಪಂಜಾಬ್‌ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದಾರೆ ಎಂದು ನನಗೆ ತಿಳಿದಿದೆ. ಅವರು ಅವರ ಪಕ್ಷಕ್ಕಾಗಿ ಕೆಲಸ ಮಾಡಿಕೊಳ್ಳಲಿ’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮಮತಾ ಉತ್ತರಿಸಿದರು.

ಬಿಹಾರ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಕ್ಕೆ ಪಕ್ಷವನ್ನು ವಿಸ್ತರಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದ್ದಾರೆ. ಹರಿಯಾಣದ ಕಾಂಗ್ರೆಸ್‌ನ ಮಾಜಿ ಸಂಸದ ಅಶೋಕ್ ತನ್ವಾರ್ ಅವರನ್ನು ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ತನ್ವಾರ್‌ ಒಂದೊಮ್ಮೆ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿದ್ದವರು. ಫೆಬ್ರವರಿ 2019 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಬಿಹಾರದ ದರ್ಭಾಂಗದ ಮಾಜಿ ಸಂಸದ ಮತ್ತು ಕ್ರಿಕೆಟಿಗ ಕೀರ್ತಿ ಆಜಾದ್ ಅವರನ್ನೂ ಮಮತಾ ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ.

ಗೋವಾ ಮತ್ತು ತ್ರಿಪುರದಿಂದ ಆರಂಭಿಸಿ ಪಶ್ಚಿಮ ಬಂಗಾಳದ ಆಚೆಗೂ ತೃಣಮೂಲ ಕಾಂಗ್ರೆಸ್ ತನ್ನ ನೆಲೆ ವಿಸ್ತರಿಸಲಿದೆ ಎಂದು ಮಮತಾ ಬುಧವಾರ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.