ADVERTISEMENT

Operation Sindoor | ಅಮಿತ್ ಶಾ, ರಾಹುಲ್‌ ಸೇರಿ ಗಣ್ಯರ ಪ್ರತಿಕ್ರಿಯೆ ಹೀಗಿದೆ...

​ಪ್ರಜಾವಾಣಿ ವಾರ್ತೆ
Published 7 ಮೇ 2025, 5:04 IST
Last Updated 7 ಮೇ 2025, 5:04 IST
<div class="paragraphs"><p>ಅಮಿತ್ ಶಾ ಹಾಗೂ ರಾಹುಲ್ ಗಾಂಧಿ&nbsp;</p></div>

ಅಮಿತ್ ಶಾ ಹಾಗೂ ರಾಹುಲ್ ಗಾಂಧಿ 

   

–ಪಿಟಿಐ ಚಿತ್ರಗಳು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ಇಂದು (ಬುಧವಾರ) ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ. ಈ ಪ್ರತೀಕಾರದ ದಾಳಿಯ ಬಗ್ಗೆ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಪಹಲ್ಗಾಮ್‌ನಲ್ಲಿ ನಮ್ಮ ಮುಗ್ಧ ಸಹೋದರರ ಕ್ರೂರ ಹತ್ಯೆಗೆ ಭಾರತ ನೀಡಿದ ಪ್ರತಿಕ್ರಿಯೆಯೇ ‘ಆಪರೇಷನ್ ಸಿಂಧೂರ’. ದೇಶದ ಜನರ ಮೇಲಿನ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರ ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಅದರ ಮೂಲದಿಂದಲೇ ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್!’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಭಾರತ್ ಮಾತಾ ಕಿ ಜೈ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಜೈ ಹಿಂದ್’ ಮತ್ತು ‘ಜೈ ಹಿಂದ್ ಕಿ ಸೇನಾ’ ಎಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ.

‘ನಮ್ಮ ಸೈನ್ಯದ ಬಗ್ಗೆ ನಮಗೆ ಹೆಮ್ಮೆ ಇದೆ. ಯಾರಾದರೂ ಭಾರತೀಯ ನಾಗರಿಕರಿಗೆ ಬೆದರಿಕೆ ಹಾಕಿದರೆ, ಅವರು ಅದೇ ಗತಿಯನ್ನು ಎದುರಿಸುತ್ತಾರೆ. ನಮ್ಮ ಸೈನ್ಯವು ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಾವು (ಕಾಂಗ್ರೆಸ್) ಕೇಂದ್ರ ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದೇವೆ. ಯಾರಾದರೂ ಭಾರತಕ್ಕೆ ಬೆದರಿಕೆ ಹಾಕಿದರೆ, ಅಂತವರ ವಿರುದ್ಧ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ದೇಶ ಒಗ್ಗಟ್ಟಾಗಿ ನಿಂತಿದೆ’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದಾರೆ.

‘ಭಾರತೀಯ ಸೇನೆ ಮತ್ತು ನಮ್ಮ ವೀರ ಸೈನಿಕರ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗಿದೆ’ ಎಂದು ದೆಹಲಿ ಮಾಜಿ ಸಿಎಂ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆಯನ್ನು ನಡೆಸಿದ್ದು, ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹಲವು ಉಗ್ರರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.