ADVERTISEMENT

ಜಮ್ಮು & ಕಾಶ್ಮೀರ: ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಹಾರಾಡಿದ ಪಾಕ್ ಡ್ರೋನ್‌ಗಳು

ಪಿಟಿಐ
Published 12 ಜನವರಿ 2026, 3:50 IST
Last Updated 12 ಜನವರಿ 2026, 3:50 IST
<div class="paragraphs"><p>ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಯೋಧರು</p></div>

ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಯೋಧರು

   

ಕೃಪೆ: ಪಿಟಿಐ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಜೌರಿ ಮತ್ತು ಪೂಂಛ್‌ ಪ್ರದೇಶಗಳಲ್ಲಿರುವ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣಾ ರೇಖೆಯುದ್ದಕ್ಕೂ (ಎಲ್‌ಒಸಿ) ಹಲವು ಪ್ರದೇಶಗಳಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಭಾನುವಾರ ಸಂಜೆ ಕಂಡುಬಂದಿವೆ.

ADVERTISEMENT

ಪಾಕಿಸ್ತಾನದ ಕಡೆಯಿಂದಲೇ ಬಂದ ಎಲ್ಲ ಡ್ರೋನ್‌ಗಳು ಕೆಲವು ನಿಮಿಷ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿ, ವಾಪಸ್‌ ಆಗಿವೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದರ ಬೆನ್ನಲ್ಲೇ, ಭದ್ರತಾ ಪಡೆಗಳು ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ನೌಶೇರಾ ಸೆಕ್ಟರ್‌ನ ಗಾನಿಯಾ – ಕಲ್ಸಿಯಾನ್‌ ಗ್ರಾಮದಲ್ಲಿ ಸಂಜೆ 6.35ರ ಸುಮಾರಿಗೆ ಹಾರಾಡುತ್ತಿದ್ದ ಡ್ರೋನ್‌ಗಳ ಮೇಲೆ ಸೇನಾ ಪಡೆಗಳು ಮಷಿನ್‌ ಗನ್‌ ಬಳಸಿ ದಾಳಿ ಮಾಡಿವೆ.

ಅದೇ ಸಮಯದಲ್ಲಿ, ರಾಜೌರಿ ಜಿಲ್ಲೆಯ ಖಬ್ಬರ್‌ ಗ್ರಾಮದಲ್ಲೂ ಕೆಲ ಸಮಯ ಡ್ರೋನ್‌ಗಳು ಹಾರಾಡಿವೆ. ಅದಕ್ಕೂ ಮೊದಲು (ಸಂಜೆ 6.25ಕ್ಕೆ), ಪೂಂಛ್‌ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಇರುವ ತೈನ್‌ನಿಂದ ಮಂಕೋಟ್ ಸೆಕ್ಟರ್‌ ವರೆಗೆ ಡ್ರೋನ್‌ನಂತಹ ವಸ್ತು ಬರುತ್ತಿರುವುದು ಕಂಡುಬಂದಿದೆ.

ಸಾಂಬಾ ವಲಯದ ರಾಮಗಢ ಸೆಕ್ಟರ್‌ನ ಛಕ್‌ ಬಾರ್ದಲ್‌ ಗ್ರಾಮದಲ್ಲಿ ಸಂಜೆ 7.15 ಸುಮಾರಿಗೆ ಇದೇ ರೀತಿಯ ವಸ್ತುಗಳು ಹಾರಾಟ ನಡೆಸಿರುವುದು ಕಂಡು ಬಂದಿದೆ.

ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿರುವ ಫಗ್ವಾಲ್‌ನ ಪಲೂರಾ ಗ್ರಾಮದಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಕಳುಹಿಸಿದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ಜನವರಿ 9ರಂದು ವಶಕ್ಕೆ ಪಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.