ADVERTISEMENT

ಅಮರಾವತಿ ದೇವನಗರಿಯಲ್ಲ, ವೇಶ್ಯೆಯರ ರಾಜಧಾನಿ: AP ಪತ್ರಕರ್ತನಿಂದ ವಿವಾದದ ಹೇಳಿಕೆ

NCW ಸ್ವಯಂಪ್ರೇರಿತ ಪ್ರಕರಣ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2025, 13:36 IST
Last Updated 10 ಜೂನ್ 2025, 13:36 IST
<div class="paragraphs"><p>ವಿವಿಆರ್ ಕೃಷ್ಣಂ ರಾಜು</p></div>

ವಿವಿಆರ್ ಕೃಷ್ಣಂ ರಾಜು

   

ಬೆಂಗಳೂರು: ‘ರಾಜಧಾನಿ ಅಮರಾವತಿ ದೇವನಗರಿಯಲ್ಲ, ವೇಶ್ಯೆಯರ ರಾಜಧಾನಿ’ ಎಂದು ಪತ್ರಕರ್ತ ವಿವಿಆರ್ ಕೃಷ್ಣಂ ರಾಜು ಹೇಳಿರುವುದು ಆಂಧ್ರಪ್ರದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಜೂನ್ 6ರಂದು ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಬೆಂಬಲಿತ ಸಾಕ್ಷಿ ಟಿ.ವಿಯಲ್ಲಿ ಪತ್ರಕರ್ತ ಕೊಮಿನೇನಿ ಶ್ರೀನಿವಾಸ್ ರಾವ್ ಅವರು ‘ಕೆಎಸ್‌ಆರ್ ಲೈವ್’ ಎಂಬ ಚರ್ಚಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದರಲ್ಲಿ ವಿವಿಆರ್ ಕೃಷ್ಣಂ ರಾಜು ಪ್ಯಾನಲಿಸ್ಟ್ ಆಗಿ ಭಾಗವಹಿಸಿದ್ದರು. ಆಂಧ್ರಪ್ರದೇಶದ ನೂತನ ಅಬಕಾರಿ ನೀತಿ ಬಗ್ಗೆ ಚರ್ಚೆ ಆಯೋಜಿಸಲಾಗಿತ್ತು.

ADVERTISEMENT

ಈ ವೇಳೆ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೃಷ್ಣಂ ರಾಜು ಅವರು ಪುರಾಣ ಕಾಲದಲ್ಲಿ ಅಮರಾವತಿಯನ್ನು ದೇವನಗರಿ ಎಂದು ಕರೆಯುತ್ತಿದ್ದರು. ಆದರೆ, ಈಗ ನಮ್ಮ ರಾಜಧಾನಿ ಅಮರಾವತಿ ವೇಶ್ಯೆಯರ ನಗರವಾಗಿ ಮಾರ್ಪಟ್ಟಿದೆ. ಇದಕ್ಕಾಗಿಯೇ ಅಬಕಾರಿ ನೀತಿಯಲ್ಲಿ ಹೆಚ್ಚು ಅಕ್ರಮ ನಡೆಯುತ್ತಿದೆ. ಎನ್‌ಡಿಎ ಮೈತ್ರಿಕೂಟದ ನೀತಿಯಾಗಿ ಮಾರ್ಪಟ್ಟಿದೆ’ ಎಂದು ಹೇಳಿದ್ದರು.

ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದರಿಂದ ಸಾಕ್ಷಿ ಟಿ.ವಿ ಅಂತರ ಕಾಯ್ದುಕೊಂಡಿದೆ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ತಿಳಿಸಿದೆ.

ಈ ಕುರಿತು ಜನಸೇನಾದ ನಾಯಕ ಪವನ್ ಕಲ್ಯಾಣ್ ಸೇರಿದಂತೆ ಟಿಡಿಪಿ ನಾಯಕರು, ಬಿಜೆಪಿ ನಾಯಕರು ಕೃಷ್ಣಂ ರಾಜು ಹೇಳಿಕೆಯನ್ನು ಖಂಡಿಸಿದ್ದಾರೆ. ಆಂಧ್ರಪ್ರದೇಶದ ಮಹಿಳೆಯರಿಗೆ ಆದ ಅತಿದೊಡ್ಡ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಮಾತನಾಡಿ, ಮಾನಹಾನಿಕರ ಹೇಳಿಕೆಗಳನ್ನು ಕೊಡುವರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ. ಈ ಕುರಿತು ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ ವರದಿ ಮಾಡಿದೆ.

NCW ಸ್ವಯಂಪ್ರೇರಿತ ಪ್ರಕರಣ ದಾಖಲು

ಕೃಷ್ಣಂ ರಾಜು ವಿವಾದಾತ್ಮಕ ಹೇಳಿಕೆ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ ಆಂಧ್ರಪ್ರದೇಶ ಡಿಜಿಪಿಗೆ ಪತ್ರ ಬರೆದಿದೆ. ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕೃಷ್ಣಂ ರಾಜು ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂಬುದರ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡಿ ಎಂದು ತಾಕೀತು ಮಾಡಿದೆ.

ಇನ್ನು, NCW ಕೇಸ್ ಬಗ್ಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಕೆಲ ನಾಯಕರು, ನಾವು ಈ ಹಿಂದೆ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳ ಬಗ್ಗೆ ಅನೇಕ ಸಾರಿ ಗಮನ ಸೆಳೆದರೂ ಕ್ಯಾರೆ ಎನ್ನದ ಆಯೋಗ ಈಗ ಓಡೋಡಿ ಬಂದಿರುವ ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.