ADVERTISEMENT

ಭಾರತಕ್ಕೆ ಚೀನಾ ನುಗ್ಗಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ: ಸಂಜಯ್ ರಾವುತ್

ಬೆಳಗಾವಿಗೆ ಪ್ರವೇಶ ಮಾಡಲು ನಮಗೆ ಯಾರ ಅನುಮತಿಯೂ ಬೇಕಿಲ್ಲ ಎಂದ ಶಿವಸೇನಾ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2022, 7:44 IST
Last Updated 21 ಡಿಸೆಂಬರ್ 2022, 7:44 IST
ಸಂಜಯ್‌ ರಾವುತ್ (ಕಡತ ಚಿತ್ರ)
ಸಂಜಯ್‌ ರಾವುತ್ (ಕಡತ ಚಿತ್ರ)   

ಮುಂಬೈ: ‘ದೇಶಕ್ಕೆ ಚೀನಾ ನುಗ್ಗಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ‘ ಎಂದು ಶಿವಸೇನೆಯ ( ಉದ್ಧವ್ ಬಾಳಾ ಸಾಹೇಬ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವುತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಬೆಳಗಾವಿ ಗಡಿ ಸಂಬಂಧ ಚರ್ಚೆಗಳು ಕಾವೇರಿರುವ ವೇಳೆಯೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಚೀನಾ ಭಾರತಕ್ಕೆ ಪ್ರವೇಶ ಮಾಡಿದಂತೆ ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಬಯಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಕಿಡಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರ ಇದ್ದು, ಈ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ‘ ಎಂದು ಅವರು ಟೀಕಿಸಿದ್ದಾರೆ.

ADVERTISEMENT

ಸದ್ಯ ಮಹಾರಾಷ್ಟ್ರದಲ್ಲೂ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಲ್ಲಿಯೂ ಗಡಿ ಸಂಬಂಧ ತೀವ್ರ ಚರ್ಚೆಗಳಾಗುತ್ತಿವೆ. ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್‌ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

‘ಮಹಾರಾಷ್ಟ್ರದ ಲೋಕಸಭೆ ಸದಸ್ಯರೊಬ್ಬರನ್ನು ಬೆಳಗಾವಿಗೆ ಪ್ರವೇಶಿಸುವುದನ್ನು ತಡೆಯಲಾಗಿದೆ. ಯಾರನ್ನೂ ತಡೆಯಬಾರದು ಎಂದು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ನಿಷೇಧ ಹೇರಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದರು.

ಈ ಸಂಬಂಧ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ, ‘ಗಡಿ ಸಮಸ್ಯೆ ಸಂಬಂಧ ಇದೇ ಮೊದಲ ಬಾರಿಗೆ ದೇಶದ ಗೃಹ ಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ. ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಾವು ನಮ್ಮ ವಾದವನ್ನು ಮುಂದಿಟ್ಟಿದ್ದೇವೆ. ಈಗ ನಾವು ಗಡಿ ಸಂಬಂಧ ರಾಜಕೀಯ ಮಾಡಬಾರದು. ಗಡಿ ಜನರ ಜತೆ ನಾವು ನಿಂತುಕೊಳ್ಳಬೇಕಿದೆ‘ ಎಂದರು.

ಈ ಹಿಂದೆ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿಗೆ ಬರುವುದಾಗಿ ಘೋಷಣೆ ಮಾಡಿದ್ದರು. ಬೆಳಗಾವಿ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರ ಸಚಿವರ ತಂಡಕ್ಕೆ ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.