ADVERTISEMENT

ಕೇರಳ ಪ್ರವಾಹ ಮಾನವ ನಿರ್ಮಿತ ದುರಂತ: ಮಾಧವ ಗಾಡ್ಗೀಳ್

ರಾಜ್ಯ ಸರ್ಕಾರದ ಪರಿಸರ ನೀತಿ ಬಗ್ಗೆ ಅಸಮಾಧಾನ

ಏಜೆನ್ಸೀಸ್
Published 18 ಆಗಸ್ಟ್ 2018, 10:37 IST
Last Updated 18 ಆಗಸ್ಟ್ 2018, 10:37 IST
ಕೇರಳದ ಅಲುವಾದಲ್ಲಿ ಪ್ರವಾಹಪೀಡಿತ ಜಾಗದಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ – ರಾಯಿಟರ್ಸ್ ಚಿತ್ರ
ಕೇರಳದ ಅಲುವಾದಲ್ಲಿ ಪ್ರವಾಹಪೀಡಿತ ಜಾಗದಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ – ರಾಯಿಟರ್ಸ್ ಚಿತ್ರ   

ತಿರುವನಂತಪುರ: ಕೇರಳದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯುತ ಪರಿಸರ ನೀತಿಯೇ ಕಾರಣ ಎಂದು ಪರಿಸರತಜ್ಞ ಪ್ರೊ. ಮಾಧವ ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಪತ್ತನ್ನು ಅವರು ‘ಮಾನವ ನಿರ್ಮಿತ ದುರಂತ’ ಎಂದು ಬಣ್ಣಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಜಲಪ್ರಳಯದಲ್ಲಿ ನಲುಗಿದೆ ಕೇರಳ: ವಿವಿಧ ರಾಜ್ಯಗಳಿಂದ ಪರಿಹಾರ ಸಹಕಾರ

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಲಾಗಿತ್ತು. ಆದರೆ, ಆ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಕೇರಳ ಸರ್ಕಾರ, ವರದಿಯಲ್ಲಿ ಸೂಚಿಸಿರುವ ಸಲಹೆಗಳು ಪ್ರಾಯೋಗಿಕವಲ್ಲ ಎಂದು ತಿಳಿಸಿತ್ತು.

‘ಸ್ಥಳೀಯಾಡಳಿತ, ಜನರ ಸಹಕಾರದೊಂದಿಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಅದನ್ನು ತಿರಸ್ಕರಿಸಲಾಯಿತು. ಕಲ್ಲುಗಣಿಗಾರಿಕೆಯೇ ಮಣ್ಣು ಕುಸಿತ ಮತ್ತು ಭೂಕುಸಿತಕ್ಕೆ ಕಾರಣ’ ಎಂದು ಗಾಡ್ಗೀಳ್ ಹೇಳಿದ್ದಾರೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯ ಪ್ರದೇಶಗಳ ಅಕ್ರಮ ಅತಿಕ್ರಮಣ, ಅತಿಯಾದ ಕಲ್ಲುಗಣಿಗಾರಿಕೆಯೇ ದುರಂತಕ್ಕೆ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೇರಳ ಪ್ರವಾಹ: ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ; ₹500 ಕೋಟಿ ಪರಿಹಾರ ಘೋಷಣೆ

ಪ್ರಸ್ತುತ ಭಾರಿ ಮಳೆಯಿಂದ ದುರಂತ ಸಂಭವಿಸಿದ ಪ್ರದೇಶಗಳು ಗಾಡ್ಗೀಳ್ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶಗಳೇ ಎನ್ನಲಾಗಿದೆ.

ವರದಿಯಲ್ಲೇನಿತ್ತು?

ಪರಿಸರ ರಕ್ಷಣೆಯ ದೃಷ್ಟಿಯಿಂದ 1.4 ಲಕ್ಷ ಕಿಲೋಮೀಟರ್‌ನಷ್ಟು ಪಶ್ಚಿಮ ಘಟ್ಟವನ್ನು ಮೂರು ವಲಯಗಳಾಗಿ ವಿಭಾಗಿಸಬೇಕು ಎಂದು ಗಾಡ್ಗೀಳ್ ವರದಿಯಲ್ಲಿ ಹೇಳಲಾಗಿತ್ತು. ಈ ಪೈಕಿ ಕೆಲವು ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಗೆ ಕಠಿಣ ನಿರ್ಬಂಧ ವಿಧಿಸಬೇಕು. ಕೆಲವು ಪ್ರದೇಶಗಳ ಅರಣ್ಯ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸುವುದು, ಅತಿ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಬಳಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. 2011ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು.

ಕೇರಳ ಸರ್ಕಾರ ಏನು ಹೇಳಿತ್ತು?

ಗಾಡ್ಗೀಳ್ ಅವರು ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾನವ ಚಟುವಟಿಕೆ ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಅನೇಕ ನಿರ್ಬಂಧಗಳಿವೆ. ಅವುಗಳನ್ನು ನಮ್ಮ ರಾಜ್ಯದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಕಾನೂನಿನ ಇತಿಮಿತಿಯಲ್ಲಿ ಪಶ್ಚಿಮ ಘಟ್ಟವನ್ನು ರಕ್ಷಿಸುವುದಾಗಿ 2012ರಲ್ಲಿ ಕೇರಳದ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಿಳಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT