ದಿಲೀಪ್, ಶಬರಿಮಲೆ ದೇಗುಲ
ಕೊಚ್ಚಿ: ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಲಯಾಳ ಚಿತ್ರರಂಗದ ನಟ ದಿಲೀಪ್‌ಗೆ ವಿಐಪಿ ದರ್ಶನ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು (ಟಿಡಿಬಿ)ಗೆ ತರಾಟೆಗೆ ತೆಗೆದುಕೊಂಡಿದೆ.
ಡಿ. 5ರಂದು ದಿಲೀಪ್‌ಗೆ ವಿಐಪಿ ದರ್ಶನ ನೀಡಲು ಕಾರಣವೇನು ಹಾಗು ಇದಕ್ಕೆ ಸಂಬಂಧಿಸಿದಂತೆ ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾ. ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಮುರಳಿ ಎಸ್. ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡಳಿ ಹಾಗೂ ಪೊಲೀಸರಿಗೆ ನಿರ್ದೇಶಿಸಿತು.
‘ದೇವಾಲಯದ ಗರ್ಭಗುಡಿ ಎದುರು ಸೊಪಾನಂ ಬಳಿ ಮುಂದಿನ ಸಾಲಿನಲ್ಲಿ ದಿಲೀಪ್ ನಿಂತಿದ್ದಾರೆ. ಹರಿವರಾಸನಂ ಪೂರ್ಣಗೊಂಡು ಬಾಗಿಲು ಹಾಕುವವರೆಗೂ ನಿಲ್ಲಲು ನಟನಿಗೆ ಅವಕಾಶ ನೀಡಿದ್ದು ಹೇಗೆ? ಈ ವಿಶೇಷ ಸವಲತ್ತು ಪಡೆಯಲು ಅವರಿಗಿರುವ ಅರ್ಹತೆಗಳೇನು? ದೇವಾಲಯದಲ್ಲಿ ಏನು ನಡೆಯುತ್ತಿದೆ? ವಯಸ್ಸಾದವರು, ಮಕ್ಕಳನ್ನು ಒಳಗೊಂಡು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವಾಗ ಒಬ್ಬ ನಟನಿಗೆ ನೀಡಿದ ಈ ವಿಶೇಷ ಆತಿಥ್ಯ ಸಾಮಾನ್ಯ ಭಕ್ತರ ಹಕ್ಕುಗಳನ್ನು ಕಸಿದುಕೊಂಡಂತಾಗಲಿಲ್ಲವೇ’ ಎಂದು ಪೀಠ ಪ್ರಶ್ನಿಸಿತು.
‘ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತರವಲ್ಲಿ ಕೆಲವರು ದರ್ಶನವಾಗದೇ ಮರಳಿದ್ದಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ನಿಂತಿದ್ದರು. ಅವರೆಲ್ಲರೂ ಯಾರಿಗೆ ದೂರು ನೀಡಬೇಕು? ಅಷ್ಟು ದೀರ್ಘಕಾಲ ಸೋಪಾನಂ ಬಳಿ ನಿಲ್ಲಲು ವಿಶೇಷ ಸವಲತ್ತಿನೊಂದಿಗೆ ಅವಕಾಶ ನೀಡಿದ್ದು ಹೇಗೆ’ ಎಂದು ಪೀಠ ಖಾರವಾಗಿ ಪ್ರಶ್ನಿಸಿತು.
‘ಸುಪ್ರೀಂ ಕೋರ್ಟ್ ಒಳಗೊಂಡಂತೆ ಸಾಂವಿಧಾನಿಕ ಸ್ಥಾನದಲ್ಲಿರುವವರು ವಿಶೇಷ ಸವಲತ್ತು ಅರ್ಹರು ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಿದ್ದರೆ ಡಿ. 5ರಂದು ನಡೆದ ಘಟನೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಈ ಪ್ರಕರಣದಲ್ಲಿ ನಟನನ್ನೂ ಪ್ರತಿವಾದಿಯಾಗಿ ಸೇರಿಸಲಾಗುವುದು’ ಎಂದು ಪೀಠ ಹೇಳಿತು.
ಸುದ್ದಿಯೊಂದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್, ವಾರ್ಷಿಕ ಮಂಡಳ ಮಕರವಿಳಕ್ಕು ದರ್ಶನ ಸಂದರ್ಭ ಇದಾಗಿರುವುದರಿಂದ, ಕೇರಳ ಹಾಗೂ ಪಕ್ಕದ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತಸಾಗರವೇ ದೇಗುಲದತ್ತ ಹರಿದುಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.