ADVERTISEMENT

ಕೇರಳದಲ್ಲಿ RSS ಕಾರ್ಯಕರ್ತ ಆತ್ಮಹತ್ಯೆ: ಡಿವೈಎಫ್‌ಐ, ಕಾಂಗ್ರೆಸ್‌ ಪ್ರತಿಭಟನೆ

ಪಿಟಿಐ
Published 16 ಅಕ್ಟೋಬರ್ 2025, 13:37 IST
Last Updated 16 ಅಕ್ಟೋಬರ್ 2025, 13:37 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಕೊಟ್ಟಾಯಂ/ಕೇರಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಆನಂದು ಅಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಆರೋಪಿಗಳ ವಿರುದ್ಧ  ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್‌ ಮತ್ತು ಡಿವೈಎಫ್‌ಐ ಕಾರ್ಯಕರ್ತರು ಗುರುವಾರ ಇಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕೊಟ್ಟಾಯಂನ ತಂಬಲಕ್ಕಾಡ್‌ ನಿವಾಸಿ, ಸಾಫ್ಟ್‌ವೇರ್‌ ಉದ್ಯೋಗಿ ಆನಂದು ಅಜಿ ಅ.9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ನಂತರ, ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕ್ಯಾಂಪ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ, ‘ಎನ್‌.ಎಂ’ ಎಂಬುವರು ಲೈಂಗಿಕ  ದೌರ್ಜನ್ಯ ಎಸಗಿದ್ದರು’ ಎಂದು ಆರೋಪಿಸಲಾದ ಪೋಸ್ಟ್‌ ಪ್ರಕಟಗೊಂಡಿದ್ದು, ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. 

ಕೇರಳದ ಪೊನ್ಕುನ್ನಂ ಎಂಬಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಡಿವೈಎಫ್‌ಐ ಕಾರ್ಯಕರ್ತರು, ‘ಆನಂದು ಅಜಿ ಆತ್ಮಹತ್ಯೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತ ನಿಧೀಶ್‌ ಮುರಳೀಧರನ್‌ ಕಾರಣ, ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. ‘ಕೊಟ್ಟಾಯಂ ಜಿಲ್ಲೆಯ ಆರ್‌ಎಸ್‌ಎಸ್‌ ಕಾರ್ಯಕರ್ತರ ವಿರುದ್ಧವೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. 

ADVERTISEMENT

‘ಆನಂದು ಅಜಿ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮುರಳೀಧರನ್‌ ಅವರ ಹೆಸರನ್ನು ಉಲ್ಲೇಖಿಸಿದ್ದರೂ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಒ.ಜೆ ಜಾನೀಶ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.