ADVERTISEMENT

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ: ಕುಶಲಕರ್ಮಿಗಳ ಭೇಟಿಯಾದ Prada ತಂಡ

ಪಿಟಿಐ
Published 16 ಜುಲೈ 2025, 12:57 IST
Last Updated 16 ಜುಲೈ 2025, 12:57 IST
<div class="paragraphs"><p>ಮಹಾರಾಷ್ಟ್ರದ ಕೊಲ್ಹಾಪುರ ಚರ್ಮೋದ್ಯಮ ಕ್ಲಸ್ಟರ್‌ಗೆ ಭೇಟಿ ನೀಡಿದ ಇಟಲಿಯ ಫ್ಯಾಷನ್ ಕಂಪನಿ ಪ್ರಾಡಾ ತಂತ್ರಜ್ಞರ ತಂಡದೊಂದಿಗೆ ಕುಶಲಕರ್ಮಿಗಳು</p></div>

ಮಹಾರಾಷ್ಟ್ರದ ಕೊಲ್ಹಾಪುರ ಚರ್ಮೋದ್ಯಮ ಕ್ಲಸ್ಟರ್‌ಗೆ ಭೇಟಿ ನೀಡಿದ ಇಟಲಿಯ ಫ್ಯಾಷನ್ ಕಂಪನಿ ಪ್ರಾಡಾ ತಂತ್ರಜ್ಞರ ತಂಡದೊಂದಿಗೆ ಕುಶಲಕರ್ಮಿಗಳು

   

ಪಿಟಿಐ ಚಿತ್ರ

ಪುಣೆ: ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಪ್ರಕರಣ ಕುರಿತ ಚರ್ಚೆ ವ್ಯಾಪಕವಾಗುತ್ತಿದ್ದಂತೆ, ಇಟಲಿಯ ಫ್ಯಾಷನ್‌ ಕಂಪನಿ ಪ್ರಾಡಾದ ತಾಂತ್ರಿಕ ತಂಡ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದೆ.

ADVERTISEMENT

ಕೊಲ್ಹಾಪುರದ ವಿಶಿಷ್ಟ ವಿನ್ಯಾಸದ ಉಂಗುಷ್ಠ ಇರುವ ಚಪ್ಪಲಿಯನ್ನೇ ಹೋಲುವ ಪಾದರಕ್ಷೆಯನ್ನು ಪ್ರಾಡಾ ಇತ್ತೀಚೆಗೆ ತನ್ನ ಪುರುಷರ ಬೇಸಿಗೆ ಸಂಗ್ರಹದಲ್ಲಿ ಪರಿಚಯಿಸಿತ್ತು. ಇದರ ಬೆಲೆ ₹1.2ಲಕ್ಷ ಎಂದು ನಮೂದಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಮಹಾರಾಷ್ಟ್ರದ ಬಹಳಷ್ಟು ಕುಶಲಕರ್ಮಿಗಳು ಹಲವು ಶತಮಾನಗಳಿಂದ ಸಿದ್ಧಪಡಿಸಿಕೊಂಡು ಬರುತ್ತಿರುವ ಮತ್ತು ಕೆಲವೇ ನೂರು ರೂಪಾಯಿಗಳಿಗೆ ಮಾರಾಟವಾಗುತ್ತಿರುವ ಕೊಲ್ಹಾಪುರಿ ಚಪ್ಪಲಿಯ ವಿನ್ಯಾಸದ ಪ್ರಾಡಾ ಪಾದರಕ್ಷೆಯ ಬೆಲೆಗೆ ಜನರು ಹೌಹಾರಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಕಂಪನಿಯನ್ನು ‘ಚಪ್ಪಲ್‌ ಚೋರ್‌’ ಎಂದು ಕರೆದರು. ಈ ಕುರಿತಂತೆ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. 

ಇದು ಸುದ್ದಿಯಾಗುತ್ತಲೇ ಜಾಗೃತಗೊಂಡ ಪ್ರಾಡಾ, ಮಹಾರಾಷ್ಟ್ರ ವಾಣಿಜ್ಯೋದ್ಯಮಿಗಳ ಸಂಘಕ್ಕೆ ಪತ್ರ ಬರೆದು, ‘ಹೊಸ ವಿನ್ಯಾಸದ ಪಾದರಕ್ಷೆ ಪ್ರದರ್ಶನಕ್ಕೆ ಇಡಲಾಗಿದೆಯಷ್ಟೇ. ಆದರೆ ವಾಣಿಜ್ಯ ತಯಾರಿಕೆ ಮತ್ತು ಬಳಕೆ ಆರಂಭಿಸಿಲ್ಲ’ ಎಂದಿದೆ.

ಪ್ರಾಡಾ ಕಂಪನಿಯ ನಾಲ್ವರು ತಂತ್ರಜ್ಞರು ಕೊಲ್ಹಾಪುರಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ ಪಾದರಕ್ಷೆ ವಿನ್ಯಾಸದ ಮುಖ್ಯಸ್ಥರೂ ಇದ್ದಾರೆ. ಕೊಲ್ಹಾಪುರದಲ್ಲಿರುವ ಚಪ್ಪಲಿ ತಯಾರಿಕಾ ಕ್ಲಸ್ಟರ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಕುಶಲಕರ್ಮಿಗಳನ್ನು ಭೇಟಿ ಮಾಡಿ, ಕೊಲ್ಹಾಪುರಿ ಚಪ್ಪಲಿ ತಯಾರಿಯ ಮಾಹಿತಿ ಪಡೆದರು’ ಎಂದು ಮಹಾರಾಷ್ಟ್ರ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಲಲಿತ್ ಗಾಂಧಿ ತಿಳಿಸಿದ್ದಾರೆ. 

‘ನಮ್ಮಲ್ಲಿ ತಯಾರಾಗುವ ಕೊಲ್ಹಾಪುರಿ ಚಪ್ಪಲಿಗಳು ಸಂಪೂರ್ಣ ಕೈಯಿಂದ ತಯಾರಾದವು. ಇದರಲ್ಲಿ ಈ ನೆಲದ ಪರಂಪರೆಯೂ ಅಡಗಿದೆ. ಇಲ್ಲಿಗೆ ಭೇಟಿ ನೀಡಿದ ಪ್ರಾಡಾ ತಂತ್ರಜ್ಞರು ತಮ್ಮ ವರದಿಯನ್ನು ಕಂಪನಿಯ ಕೇಂದ್ರ ಕಚೇರಿಗೆ ಕಳುಹಿಸಲಿದ್ದಾರೆ. ಮುಂದಿನ ಹಂತದಲ್ಲಿ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ’ ಎಂದಿದ್ದಾರೆ.

ಕೊಲ್ಹಾಪುರಿ ಚಪ್ಪಲಿಯ ನಕಲು ಮಾಡಿದ್ದರ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಲಿತ್ ಗಾಂಧಿ, ‘ಪ್ರಾಡಾ ವಿನ್ಯಾಸದ ಚಪ್ಪಲಿಯನ್ನು ಮೇಲ್ನೋಟಕ್ಕೆ ನೋಡಿದಾಗ ಅದು ಕೊಲ್ಹಾಪುರಿ ಚಪ್ಪಲಿಯಂತೆಯೇ ಕಂಡಿದೆ. ಈ ವಿನ್ಯಾಸದ ಮೂಲವನ್ನು ತಿಳಿಸುವಂತೆ ಕಂಪನಿಗೆ ಇಮೇಲ್ ಕಳುಹಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಕಂಪನಿ, ಪಾದರಕ್ಷೆಯ ವಿನ್ಯಾಸ ಕೊಲ್ಹಾಪುರಿ ಚಪ್ಪಲಿಯನ್ನೇ ಹೋಲುವಂತಿದೆ ಎಂದಿತ್ತು’ ಎಂದು ತಿಳಿಸಿದ್ದಾರೆ.

ಕ್ಲಸ್ಟರ್ ಭೇಟಿಯ ನಂತರ ಪ್ರಾಡಾ ತಂಡವು ಪಾದರಕ್ಷೆಗಳ ಮಾರಾಟ ಮಳಿಗೆಗಳಿಗೂ ಭೇಟಿ ನೀಡಿ ಅಲ್ಲಿನ ವರ್ತಕರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಕಲೆಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.