
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ನಂತರ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹುಲ್, ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ ಭಾರತ–ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ವ್ಯಕ್ತಪಡಿಸಿದರು. ಪ್ರಕಟಿತವಲ್ಲದ ಪುಸ್ತಕವನ್ನು ಲೋಕಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ನರವಾಣೆ ಅವರ ಆತ್ಮಚರಿತ್ರೆಯ ಕೆಲವು ಅಂಶಗಳನ್ನು ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ ಎನ್ನಲಾಗಿದೆ. ಅಪ್ರಕಟಿತ ಪುಸ್ತಕದ ವಿಚಾರಗಳನ್ನು ಲೋಕಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ. ಇದು ನಿಯಮಗಳ ಉಲ್ಲಂಘನೆಯಾಗುತ್ತದೆ. ಸಂಸದೀಯ ಸಂಪ್ರದಾಯಕ್ಕೆ ವಿರೋಧವಾಗಿದೆ. ನಿಯತಕಾಲಿಕೆಯಲ್ಲಿ ಏನೂ ಬೇಕಾದರೂ ಪ್ರಕಟಿಸಬಹುದು ಎಂದು ರಾಹುಲ್ ಹೇಳಿಕೆಗೆ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ. ಸಿಂಗ್‌ಗೆ ಅಮಿತ್ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸದನದಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ರಾಹುಲ್‌ಗೆ ಅವಕಾಶ ನೀಡಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.