ADVERTISEMENT

LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

ಪಿಟಿಐ
Published 20 ನವೆಂಬರ್ 2025, 9:37 IST
Last Updated 20 ನವೆಂಬರ್ 2025, 9:37 IST
<div class="paragraphs"><p>ಚಿರಾಗ್ ಪಾಸ್ವಾನ್</p></div>

ಚಿರಾಗ್ ಪಾಸ್ವಾನ್

   

ಪಿಟಿಐ ಚಿತ್ರ

ಪಟ್ನಾ: ಬಿಹಾರ ಸಂಪುಟದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)ದ ಇಬ್ಬರು ಶಾಸಕರ ಸೇರ್ಪಡೆಗೆ ಅತೀವ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವರೂ ಆಗಿರುವ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್‌, ‘ಇದೊಂದು ಅದ್ಭುತ ವಿಜಯ. ತಂದೆ ರಾಮ್ ವಿಲಾಸ್ ಪಾಸ್ವಾನ್‌ ಕನಸು ನನಸಾದ ಕ್ಷಣ’ ಎಂದು ಬಣ್ಣಿಸಿದ್ದಾರೆ.

ADVERTISEMENT

ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಅವರು ನಂತರ ಮಾತನಾಡಿ, ‘ಮತದಾರರ ಬೆಂಬಲವು ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಭಿವೃದ್ಧಿ ಹೊಂದಿದ ಬಿಹಾರದ ನಿರ್ಮಾಣದತ್ತ ಪಕ್ಷ ಕೆಲಸ ಮಾಡಲಿದೆ’ ಎಂದು ಹೇಳಿದ್ದಾರೆ.

‘ಪಕ್ಷದ ಪಾಲಿಗೆ ಇದು ಅತಿ ದೊಡ್ಡ ದಿನ. ಈ ಸಂದರ್ಭದಲ್ಲಿ ನಾನು ಸ್ಮರಿಸುವುದು ನನ್ನ ತಂದೆ ಗೌರವಾನ್ವಿತ ರಾಮ್ ವಿಲಾಸ್ ಪಾಸ್ವಾನ್‌ ಅವರನ್ನು’ ಎಂದು ಚಿರಾಗ್ ಹೇಳಿದ್ದಾರೆ.

243 ಸ್ಥಾನಗಳ ಬಿಹಾರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್‌ಡಿಎ ಮಿತ್ರಪಕ್ಷವಾದ ಎಲ್‌ಜೆಪಿ(ರಾಮ್‌ ವಿಲಾಸ್‌), 19 ಸ್ಥಾನಗಳನ್ನು ಗೆದ್ದುಕೊಂಡಿತು.

‘ಅವರಿಗೆ (ರಾಮ್‌ ವಿಲಾಸ್ ಪಾಸ್ವಾನ್‌) ಇಂದು ನಿಜಕ್ಕೂ ಖುಷಿಯಾಗಿದೆ. ಅವರು ಬಯಸುತ್ತಿದ್ದ ಎತ್ತರಕ್ಕೆ ಇಂದು ಪಕ್ಷ ಏರಿದೆ. ನಮ್ಮ ಪಕ್ಷದ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ಭುತ ಜಯವನ್ನು ಪಕ್ಷ ಸಾಧಿಸಿದೆ. ದೊಡ್ಡ ಜಯವು ಸದಾ ದೊಡ್ಡ ಜವಾಬ್ದಾರಿಯನ್ನೇ ಹೊತ್ತು ತರುತ್ತದೆ. ಆ ಎಲ್ಲಾ ಜವಾಬ್ದಾರಿಗಳ ಅರಿವು ನನಗಿದೆ’ ಎಂದು ಹೇಳಿದ್ದಾರೆ.

‘ಬಿಹಾರದ ಸುವರ್ಣಯುಗ ಈಗ ಆರಂಭವಾಗಿದೆ. ನಮ್ಮ ಕನಸಿನ ಬಿಹಾರ ನಿರ್ಮಾಣಕ್ಕಾಗಿ ಯುದ್ಧೋಪಾದಿಯಲ್ಲಿ ಕೆಲಸವನ್ನು ಆರಂಭಿಸುತ್ತೇವೆ. ‘ಬಿಹಾರವೇ ಮೊದಲು, ಬಿಹಾರಿಗಳು ಮೊದಲು’ ಎಂಬ ಗುರಿಯತ್ತ ತಕ್ಷಣದಿಂದಲೇ ಕೆಲಸ ಆರಂಭಿಸಲಾಗುವುದು’ ಎಂದು ಚಿರಾಗ್ ಹೇಳಿದ್ದಾರೆ.

243 ಸ್ಥಾನಗಳಲ್ಲಿ 202ರಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎನ್‌ಡಿಎ ಸರ್ಕಾರ ರಚಿಸಿದೆ. ಮೈತ್ರಿಯ ಪ್ರಮುಖ ಪಕ್ಷವಾದ ಜೆಡಿಯು ಕಡೆಯಿಂದ ಅದರ ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಜೆಡಿಯು, ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಮೊಹಮ್ಮದ್‌ ಆರಿಫ್ ಖಾನ್‌ ಅವರು ಸಿಎಂ ನಿತೀಶ್‌ ಕುಮಾರ್‌ ಸೇರಿದಂತೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್‌ ಚೌಧರಿ ಮತ್ತು ಉಪನಾಯಕ ವಿಜಯ್‌ ಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಈ ಚುನಾವಣೆಯಲ್ಲಿ 89 ಕ್ಷೇತ್ರಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ನಂತರದಲ್ಲಿ ಜೆಡಿಯು 85 ಸ್ಥಾನಗಳನ್ನು ಗೆದ್ದುಕೊಂಡಿತು. ಎಲ್‌ಜೆಪಿ(ಆರ್‌ವಿ) ಪಕ್ಷವು 19, ಎಚ್‌ಎಎಂ–ಎಸ್‌ ಪಕ್ಷವು 5 ಮತ್ತು ಆರ್‌ಎಲ್‌ಎಂ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಬಿಜೆಪಿಯ 14, ಜೆಡಿಯುನ 8, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯ (ಆರ್‌ವಿ) 2, ಎಚ್‌ಎಎಂ ಮತ್ತು ಆರ್‌ಎಲ್‌ಎಂ ಪಕ್ಷದ ತಲಾ ಒಬ್ಬ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುರುವಾರ ನಡೆದ ಸಮಾರಂಭದಲ್ಲಿ 27 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.