@KanganaTeam
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು.
‘ಇದು ಇಲ್ಲಿಂದ ನಾಮಪತ್ರ ಸಲ್ಲಿಸಲು ನನಗೆ ಲಭಿಸಿದ ಮೊದಲ ಮತ್ತು ಕೊನೆಯ ಅವಕಾಶ ಅಲ್ಲ ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಮಂಡಿ ಕ್ಷೇತ್ರದಿಂದ ಇನ್ನಷ್ಟು ಸಲ ನಾಮಪತ್ರ ಸಲ್ಲಿಸುವ ಅವಕಾಶಗಳು ಸಿಗಲಿವೆ’ ಎಂದು ಕಂಗನಾ ವಿಶ್ವಾಸ ವ್ಯಕ್ತಪಡಿಸಿದರು.
ಹಿಮಾಚಲ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಲ್ ಅವರು ಕಂಗನಾಗೆ ಸಾಥ್ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ (ವಾರಾಣಸಿ) ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ ದಿನದಂದೇ ಚೋಟಿ ಕಾಶಿಯಿಂದ (ಮಂಡಿ) ನಾಮಪತ್ರ ಸಲ್ಲಿಸುವ ಅವಕಾಶ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಚಂಡೀಗಢ ಕ್ಷೇತ್ರದ ಅಭ್ಯರ್ಥಿ ಮನೀಷ್ ತಿವಾರಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ಚಂಡೀಗಢ ಘಟಕದ ಅಧ್ಯಕ್ಷ ಎಚ್.ಎಸ್.ಲಕ್ಕಿ ಹಾಗೂ ಇತರ ಮುಖಂಡರು ಜತೆಗಿದ್ದರು. ತಿವಾರಿ ಅವರು ಬಿಜೆಪಿಯ ಸಂಜಯ್ ಟಂಡನ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
‘ಚಂಡೀಗಢ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಲು ನಿಮ್ಮ ಆಶೀರ್ವಾದ ಬೇಕಿದೆ’ ಎಂದು ತಿವಾರಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.