ಆಸ್ಪತ್ರೆ
Credit: iStock Photo
ಇಂದೋರ್: ಮಧ್ಯಪ್ರದೇಶದ ಮಹಾರಾಜ ಯಶ್ವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ (ಎಂವೈಎಚ್) ಹೆಣ್ಣು ಶಿಶುವೊಂದು ಮೃತಪಟ್ಟ ಕೆಲವು ದಿನಗಳ ನಂತರ ಬುಡಕಟ್ಟು ಸಂಘಟನೆಯೊಂದು ಪ್ರತಿಕ್ರಿಯಿಸಿದ್ದು, ಆಸ್ಪತ್ರೆಯಲ್ಲಿ ಶಿಶುವಿನ 4 ಬೆರಳುಗಳನ್ನು ಇಲಿಗಳು ಕಚ್ಚಿ ಹಾಕಿದ್ದವು ಎಂದು ಆರೋಪಿಸಿದೆ.
ಇತ್ತ ಬುಡಕಟ್ಟು ಸಂಘಟನೆಯ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆ ಆಡಳಿತ ಮಂಡಳಿಯು, ಜನರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಿಡಿಕಾರಿದೆ.
‘ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಎಂವೈಎಚ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎರಡು ಹೆಣ್ಣು ಶಿಶುಗಳ ಮೇಲೆ ಇಲಿಗಳು ದಾಳಿ ಮಾಡಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಧಾರ್ ಜಿಲ್ಲೆಯ ಬುಡಕಟ್ಟು ಸಮುದಾಯದ ದೇವರಾಮ್ ಅವರ ಹೆಣ್ಣು ಶಿಶುವನ್ನು ಐಸಿಯುಗೆ ದಾಖಲಿಸಲಾಗಿತ್ತು. ಇಲಿಗಳ ದಾಳಿಯಿಂದ ಶಿಶು ಮೃತಪಟ್ಟಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶಿಶುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಜೈ ಆದಿವಾಸಿ ಯುವ ಶಕ್ತಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಲೋಕೇಶ್ ಮುಜಲ್ದಾ ಆರೋಪಿಸಿದ್ದಾರೆ.
‘ಅಂತ್ಯಕ್ರಿಯೆ ನಡೆಸುವ ವೇಳೆ ಶಿಶುವಿನ ಒಂದು ಕೈನ ನಾಲ್ಕು ಬೆರಳುಗಳನ್ನು ಇಲಿಗಳು ಸಂಪೂರ್ಣವಾಗಿ ಕಚ್ಚಿ ಹಾಕಿರುವ ಸಂಗತಿ ದೃಢಪಟ್ಟಿದೆ. ಆದರೆ, ಇಲಿ ಕಡಿತದಿಂದಾಗಿ ಮಗುವಿನ ಬೆರಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುಳ್ಳು ಹೇಳುವ ಮೂಲಕ ಎಂವೈಎಚ್ ಆಡಳಿತವು ಪೋಷಕರನ್ನು ದಾರಿ ತಪ್ಪಿಸಿತ್ತು’ ಎಂದು ಲೋಕೇಶ್ ದೂರಿದ್ದಾರೆ.
ತೀವ್ರ ನಿರ್ಲಕ್ಷ್ಯದ ಆರೋಪಗಳಿಂದಾಗಿ ಟೀಕೆಗಳನ್ನು ಎದುರಿಸುತ್ತಿರುವ ಎಂವೈಎಚ್ ಆಡಳಿತವು, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶಿಶುಗಳು ಸೆಪ್ಟಿಸೆಮಿಯಾದಿಂದ (ರಕ್ತದಲ್ಲಿ ವಿಷಕಾರಿ ಅಂಶ ಪತ್ತೆಯಾಗುವುದು ಮೃತಪಟ್ಟಿವೆ. ಹೊರತು ಇಲಿ ಕಡಿತದಿಂದಲ್ಲ ಎಂದು ಹೇಳಿಕೊಂಡಿದೆ.
‘ಸೆ.2ರಂದು ಇಲಿಗಳು ಕಚ್ಚಿದ್ದ ಮತ್ತೊಂದು ನವಜಾತ ಶಿಶು ಮೃತಪಟ್ಟಿತ್ತು. ಈ ಮಗುವಿಗೂ ಹುಟ್ಟುವಾಗಲೇ ಹಲವು ಸಮಸ್ಯೆಗಳಿದ್ದವು. ನ್ಯುಮೋನಿಯಾ ಸೋಂಕಿನಿಂದ ಶಿಶು ಮೃತಪಟ್ಟಿತ್ತು’ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.