ಪ್ರಯಾಗರಾಜ್‌ನತ್ತ ತೆರಳುತ್ತಿರುವ ವಾಹನಗಳು
ಪಿಟಿಐ ಚಿತ್ರ
ರೇವಾ (ಮಧ್ಯಪ್ರದೇಶ): ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ವಾಹನಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದಾಗಿ, ಮಧ್ಯಪ್ರದೇಶದ ರೇವಾದಲ್ಲಿ ಭಾನುವಾರ (ವಾರಾಂತ್ಯದಲ್ಲಿ) ವಿಪರೀತವೆನ್ನುವಷ್ಟು ವಾಹನಗಳು ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇವಾ ಜಿಲ್ಲೆಯ ಛಕ್‌ಘಾಟ್ ಗಡಿ ಪ್ರದೇಶದಲ್ಲಿ ಪ್ರತಿ ಗಂಟೆಗೆ ಸುಮಾರು ಸಾವಿರ ವಾಹನಗಳು ಮಹಾ ಪ್ರಯಾಗರಾಜ್‌ನತ್ತ ತೆರಳುತ್ತಿವೆ. ಅದೇ ವೇಳೆ, 800ಕ್ಕೂ ಅಧಿಕ ವಾಹನಗಳು ಆ ಕಡೆಯಿಂದಲೂ ಬರುತ್ತಿವೆ ಎಂದು ಹೇಳಿದ್ದಾರೆ.
ರೇವಾ ಜಿಲ್ಲೆಯ ಛಕ್‌ಘಾಟ್ ಗಡಿಯಿಂದ ಸುಮಾರು 45 ಕಿ.ಮೀ ದೂರದಲ್ಲಿ ಪ್ರಯಾಗರಾಜ್ ಇದೆ.
ಕುಂಭಮೇಳಕ್ಕೆ ಬರುವ ವಾಹನಗಳ ನಿಲುಗಡೆಗೆ ಉತ್ತರ ಪ್ರದೇಶ ಗಡಿಯಲ್ಲಿರುವ ಛಕ್‌ಘಾಟ್‌ನಿಂದ ಕೇವಲ 6 ಕಿ.ಮೀ ದೂರದಲ್ಲಿ ಮೊದಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಷ್ಟ್ರೀಯ ಗೆದ್ದಾರಿ 30ರ ಮೂಲಕ ಪ್ರಯಾಗರಾಜ್‌ನತ್ತ ಹೋಗುತ್ತಿರುವ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಅದೇ ರೀತಿ, ಪ್ರಯಾಗರಾಜ್‌ನಿಂದಲೂ ಭಾರಿ ಸಂಖ್ಯೆಯ ಜನರು ಮರಳುತ್ತಿದ್ದಾರೆ. ಇದರಿಂದಾಗಿ, ರಸ್ತೆಗಳಲ್ಲಿ ವಾಹನ ಸಂಚಾರ ಏರಿಕೆಯಾಗಿದೆ ಎಂದು ರೇವಾ ವಲಯದ ಪೊಲೀಸ್ ಅಧಿಕಾರಿ ಸಾಕೇತ್ ಪ್ರಕಾಶ್ ಪಾಂಡೆ ಹೇಳಿದ್ದಾರೆ.
'ಬೇಲಾ, ಗಂಗೇವ್ ಮತ್ತು ಛಕ್‌ಘಾಟ್ ಪ್ರದೇಶಗಳಲ್ಲಿ ಸದ್ಯಕ್ಕೆ ವಾಹನಗಳ ಸಂಚಾರವನ್ನು ತಡೆಯುತ್ತಿಲ್ಲ. ಆದರೆ, ಪೊಲೀಸರು ಹಾಗೂ ಆಡಳಿತ ತೀವ್ರ ನಿಗಾ ಇಟ್ಟಿದೆ' ಎಂದಿದ್ದಾರೆ.
ವಾರಾಂತ್ಯವಾಗಿರುವುದರಿಂದ ಕುಂಭಮೇಳಕ್ಕೆ ಹೋಗುವ ವಾಹನಗಳ ಸಂಖ್ಯೆ ಏರಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಉದಿತ್ ಮಿಶ್ರಾ ಹೇಳಿದ್ದಾರೆ.
ಯಾತ್ರಿಕರಿಗಾಗಿ ತೆರೆಯಲಾಗಿರುವ ಸಹಾಯ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಜನರು ಉಳಿದುಕೊಳ್ಳಲು ಹಲವೆಡೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಪ್ರದೇಶದ ಮೈಹಾರ್, ಕಟ್ನಿ ಹಾಗೂ ಸತ್ನಾ ಜಿಲ್ಲೆಗಳಲ್ಲಿಯೂ ಜನರು ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್ ನಗರವನ್ನು 'ವಾಹನ ಸಂಚಾರ ಮುಕ್ತ ವಲಯ' ಎಂದು ಘೋಷಿಸಿರುವುದರಿಂದಾಗಿ, ಗಡಿಯಲ್ಲಿ ಸಂಚಾರ ಹೆಚ್ಚಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಜನವರಿ 13ರಂದು ಆರಂಬವಾಗಿರುವ ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಈ ತಿಂಗಳ ಆರಂಭದಲ್ಲಿ, ಮಧ್ಯಪ್ರದೇಶದ ಕಟ್ನಿಯಿಂದಲೇ ಭಾರಿ ಸಂಚಾರ ದಟ್ಟಣೆ ತಲೆದೋರಿತ್ತು. ಕಟ್ನಿಯು, ಪ್ರಯಾಗರಾಜ್‌ನಿಂದ 250 ಕಿ.ಮೀ. ದೂರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.