ADVERTISEMENT

ರೈಲು ಸ್ಫೋಟ ಪ್ರಕರಣ | ಅಮಾಯಕರಿಗೆ ಶಿಕ್ಷಯಾಗದಂತೆ ಅತ್ಯುತ್ತಮ ವಕೀಲರ ನೇಮಕ: ಪವಾರ್

ಮೃತ್ಯುಂಜಯ ಬೋಸ್
Published 24 ಜುಲೈ 2025, 15:48 IST
Last Updated 24 ಜುಲೈ 2025, 15:48 IST
ಅಜಿತ್ ಪವಾರ್
ಅಜಿತ್ ಪವಾರ್   

ಪಿಟಿಐ ಚಿತ್ರ

ಮುಂಬೈ: ಮುಂಬೈ ರೈಲು ಸ್ಫೋಟ ಪ್ರಕರಣದ ತಪ್ಪಿತಸ್ಥರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಈ ಪ್ರಕರಣ ಕುರಿತು ವಾದ ಮಂಡಿಸಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ವಿಶೇಷ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯವು, 12 ಆರೋಪಿಗಳ ಪೈಕಿ ಐವರಿಗೆ ಮರಣದಂಡನೆ ಹಾಗೂ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ 2015ರಲ್ಲಿ ಆದೇಶ ಹೊರಡಿಸಿತ್ತು. ನ್ಯಾ. ಅನಿಲ್ ಕಿಲೋರ್ ಮತ್ತು ನ್ಯಾ. ಶ್ಯಾಮ್ ಚಂಡಕ್ ಅವರಿದ್ದ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು ಸೋಮವಾರ 12 ಮಂದಿಯನ್ನೂ ಶಿಕ್ಷೆಯಿಂದ ಖುಲಾಸೆಗೊಳಿಸಿದೆ.

ADVERTISEMENT

ಮಹಾ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠ, ಬಾಂಬೆ ಹೈಕೋರ್ಟ್ ತೀರ್ಪಿಗೆ ಗುರುವಾರ ತಡೆ ನೀಡಿದೆ.

ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು ಸರ್ಕಾರದ ಪರ ವಾದ ಮಂಡಿಸಿದರು.

2006ರ ಜುಲೈ 11ರಂದು ಮುಂಬೈ ಲೋಕಲ್‌ ರೈಲು ಸಂಚರಿಸುವ ಹಲವು ಮಾರ್ಗಗಳಲ್ಲಿ ಏಳು ಕಡೆ ಸ್ಫೋಟ ಸಂಭವಿಸಿ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಪೊಲೀಸರೊಂದಿಗೆ ಫಡಣವೀಸ್‌ ಚರ್ಚೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ಬಾಂಬೆ ಹೈಕೋರ್ಟ್‌ ತೀರ್ಪಿನ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್, 'ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳಲಿದ್ದೇವೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ಆದರೆ, ನಿರಪರಾಧಿಗಳಿಗೆ ತೊಂದರೆಯಾಗಬಾರದು ಎಂಬುದು ನಮ್ಮ ನಿಲುವು' ಎಂದು ತಿಳಿಸಿದ್ದಾರೆ.

ಖುಲಾಸೆಯಾದವರು
ಮರಣದಂಡನೆಗೆ ಗುರಿಯಾಗಿದ್ದ ಕಮಲ್‌ ಅನ್ಸಾರಿ, ಮೊಹಮ್ಮದ್‌ ಫೈಸಲ್‌ ಅತೌರ್‌ ರೆಹಮಾನ್‌ ಶೇಖ್‌, ಎಹ್ತೆಶಾಮ್‌ ಕುತುಬುದ್ದೀನ್‌ ಸಿದ್ದಿಕಿ, ನವೀದ್ ಹುಸೇನ್‌ ಖಾನ್, ಆಸಿಫ್‌ ಖಾನ್‌ ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ತನ್ವೀರ್ ಅಹ್ಮದ್ ಮೊಹಮ್ಮದ್ ಇಬ್ರಾಹಿಂ ಅನ್ಸಾರಿ, ಮೊಹಮ್ಮದ್ ಮಜೀದ್ ಮೊಹಮ್ಮದ್ ಶಫಿ, ಶೇಖ್ ಮೊಹಮ್ಮದ್ ಅಲಿ ಆಲಂ ಶೇಖ್, ಮೊಹಮ್ಮದ್ ಸಾಜಿದ್ ಮರ್ಗುಬ್ ಅನ್ಸಾರಿ, ಮುಜಮ್ಮಿಲ್ ಅತೌರ್ ರೆಹಮಾನ್ ಶೇಖ್, ಸುಹೇಲ್ ಮೆಹಮೂದ್ ಶೇಖ್, ಜಮೀರ್ ಅಹ್ಮದ್ ಲತಿಯುರ್ ರೆಹಮಾನ್ ಶೇಖ್ ಅವರನ್ನು ಬಾಂಬೆ ಹೈಕೋರ್ಟ್‌ ಶಿಕ್ಷೆಯಿಂದ ಖುಲಾಸೆಗೊಳಿಸಿದೆ. ಮರಣದಂಡನೆಗೆ ಗುರಿಯಾಗಿದ್ದ ಕಮಲ್ ಅನ್ಸಾರಿ ಎಂಬಾತ 2021ರಲ್ಲೇ ಮೃತಪಟ್ಟಿದ್ದಾನೆ.

ಅಬ್ದುಲ್‌ ವಾಹಿಬ್‌ ಶೇಖ್‌ ಎಂಬಾತನನ್ನು MCOCA ನ್ಯಾಯಾಲಯವು 2015ರಲ್ಲೇ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ರಾಜ್ಯ ಸರ್ಕಾರವು ಅದನ್ನು ಪ್ರಶ್ನಿಸಿ ಆಗ ಕೋರ್ಟ್‌ ಮೆಟ್ಟಿಲೇರಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.