
ನಿತೇಶ್ ರಾಣೆ ಮತ್ತು ಉದ್ಧವ್ ಠಾಕ್ರೆ
ಮುಂಬೈ: ಮುಂಬರುವ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಲ್ಲಿ, ಅವರಿಗೆ ನೀಡಬೇಕಾದ ಅಭಿವೃದ್ಧಿ ನಿಧಿಯನ್ನು ತಡೆಹಿಡಿಯುತ್ತೇವೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
ಭಾನುವಾರ ಸಿಂಧುದುರ್ಗ ಜಿಲ್ಲೆಯ ಕಂಕ್ಲಾವಿಯ ಫೋಂಡಾ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು ಪಕ್ಷದ ಚಿಹ್ನೆಯನ್ನು ನೋಡಿದ ಬಳಿಕವೇ ಅನುದಾನ ಬಿಡುಗಡೆ ಮಾಡುತ್ತೇನೆ. ಕಮಲ ಅಥವಾ ಬಿಲ್ಲು ಮತ್ತು ಬಾಣ (ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಚಿಹ್ನೆಗಳು) ಕಂಡರೆ, ತಕ್ಷಣವೇ ಹಣವನ್ನು ನೀಡಲಾಗುತ್ತದೆ. ಒಂದು ವೇಳೆ ತಪ್ಪಾಗಿ, ಪಂಜಿನ ಚಿಹ್ನೆ (ಶಿವಸೇನೆ ಯುಬಿಟಿ) ಕಂಡುಬಂದರೆ... ಈಗಾಗಲೇ ಮಂಜೂರು ಮಾಡಲಾದ ಹಣವನ್ನು ಸಹ ಹಿಂಪಡೆಯುತ್ತೇನೆ’ ಎಂದಿದ್ದಾರೆ.
‘ಎಲ್ಲಾ ಸರಪಂಚರು ತಮ್ಮ ಗ್ರಾಮ ಪಂಚಾಯತ್‌ಗಳನ್ನು ನಮಗೆ ಹಸ್ತಾಂತರಿಸಬೇಕೆಂದು ನಾವು ಸ್ಪಷ್ಟವಾಗಿ ಹೇಳಿದ್ದೆವು. ಇಲ್ಲದಿದ್ದರೆ, ಅವರಿಗೆ ಒಂದು ರೂಪಾಯಿಯೂ ಅನುದಾನ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೆವು. ಆದ್ದರಿಂದಲೇ ಎಲ್ಲಾ ಸರಪಂಚರು ಬೇಗನೆ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು’ ಎಂದು ನಿತೇಶ್ ಹೇಳಿದ್ದಾರೆ.
ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಗಳು ಏಕಪಕ್ಷೀಯವಾಗುತ್ತಿವೆ ಮತ್ತು ಮತದಾರರು ಪ್ರತಿಸ್ಪರ್ಧಿಗಳನ್ನು ಬೆಂಬಲಿಸುವ ಅಗತ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಸದ ನಾರಾಯಣ ರಾಣೆ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತಿವೆ ಮತ್ತು ಮುಂದಿನ ಐದು ವರ್ಷಗಳ ಕಾಲ ಸಿಂಧುದುರ್ಗ ಜಿಲ್ಲೆ ಅವರ ನಾಯಕತ್ವದಲ್ಲಿ ಉಳಿಯುತ್ತದೆ ಎಂದು ನಿತೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಬಗ್ಗೆ ಬಿಜೆಪಿಗೆ ಯಾವುದೇ ಚಿಂತನೆ ಇಲ್ಲ. ಚುನಾವಣೆಯ ನಂತರ ಅವರು (ಶಿವಸೇನೆ ನಾಯಕರು) ಮತ್ತೆ ಅನುದಾನಕ್ಕಾಗಿ ನಮ್ಮ ಬಳಿಗೆ ಬರಬೇಕಾಗುತ್ತದೆ’ ಎಂದು ಎಂದಿದ್ದಾರೆ.
12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯಿತಿ ಸಮಿತಿಗೆ ಫೆಬ್ರುವರಿ 7ರಂದು ಚುನಾವಣೆ ನಡೆಯಲಿದ್ದು, ಫೆ.9ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.