ಏಕನಾಥ ಶಿಂದೆ
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ‘ಮಹಾಯುತಿ’ ಒಕ್ಕೂಟದ ಸರ್ಕಾರ ರಚನೆ ಇನ್ನೂ ಸ್ಪಷ್ಟರೂಪ ಪಡೆದಿಲ್ಲ. ಶುಕ್ರವಾರ ನಡೆಯಬೇಕಿದ್ದ ಮಿತ್ರಪಕ್ಷಗಳ ಸಭೆ ರದ್ದಾಗಿದ್ದು, ಭಾನುವಾರ ನಡೆಯುವ ಸಂಭವವಿದೆ.
ಮಿತ್ರಪಕ್ಷಗಳ ಚುನಾಯಿತ ಶಾಸಕರ ಸಭೆ ರದ್ದಾದ ಬೆನ್ನಲ್ಲೇ ಉಸ್ತುವಾರಿ ಸಿ.ಎಂ ಏಕನಾಥ ಶಿಂದೆ ಅವರು ದಿಢೀರನೇ ತಮ್ಮ ಹುಟ್ಟೂರಿಗೆ ತೆರಳಿದರು.
‘ಸಿ.ಎಂ ಯಾರು’ ಎಂಬ ಕುತೂಹಲ ಮುಂದುವರಿದಿರುವಂತೆಯೇ, ‘ನೂತನ ಸಿ.ಎಂ ಮತ್ತು ಸಂಪುಟ ಸದಸ್ಯರ ಪ್ರಮಾಣವಚನ ಮುಂದಿನ ವಾರ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ. ಆದರೆ, ದಿನಾಂಕ ಸ್ಪಷ್ಟವಾಗಿಲ್ಲ.
ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ್ದ ಶಿಂದೆ ಅವರು, ‘ಸರ್ಕಾರ ರಚನೆ ಕುರಿತು ಅಮಿತ್ ಶಾ ಅವರೊಂದಿಗೆ ಒಂದು ಸುತ್ತಿನ ಚರ್ಚೆ ನಡೆದಿದೆ. ಶುಕ್ರವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ ಎಂದಿದ್ದರು. ಆದರೆ ಅಂತಹ ಸಭೆ ನಡೆಯಲಿಲ್ಲ.
ನವದೆಹಲಿಯಿಂದ ವಾಪಸಾದ ಶಿಂದೆ ಶುಕ್ರವಾರ ಸಂಜೆಯೇ ಸತಾರಾ ಜಿಲ್ಲೆಯ ತನ್ನ ಹುಟ್ಟೂರಿಗೆ ತೆರಳಿದರು. ‘ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಗೆ ಶಿಂದೆ ಅವರು ಅಡ್ಡಿ ಆಗುವುದಿಲ್ಲ’ ಎಂದು ಶಿವಸೇನೆ ಬಣದ ನಾಯಕರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಆದರೆ, ಹೊಸ ಸರ್ಕಾರದಲ್ಲಿ ಶಿಂದೆ ಪಾತ್ರ ಏನು ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಡಿಸಿಎಂ ಸ್ಥಾನ ಒಪ್ಪಿಕೊಳ್ಳಬೇಕು ಎಂದು ಒಂದು ವರ್ಗ ಒತ್ತಾಯಿಸಿದರೆ, ಮತ್ತೊಂದು ವರ್ಗವು, ‘ಎರಡೂವರೆ ವರ್ಷ ಸಿ.ಎಂ ಆಗಿದ್ದು, ಈಗ ಸಂಪುಟದಲ್ಲಿ ಎರಡನೇ ಸ್ಥಾನ ಒಪ್ಪಿಕೊಳ್ಳುವುದು ಸೂಕ್ತವಲ್ಲ’ ಎಂಬ ವಾದವನ್ನು ಮುಂದಿಡುತ್ತಿದೆ.
‘ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪುವ ಕುರಿತು ಶಿಂದೆ ಅವರೇ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಅವರು ಡಿಸಿಎಂ ಸ್ಥಾನ ಒಪ್ಪದಿದ್ದರೆ, ಅದು ಪಕ್ಷದ ಮತ್ತೊಬ್ಬರಿಗೆ ದಕ್ಕಲಿದೆ’ ಎಂದು ಮುಖಂಡ ಸಂಜಯ್ ಶಿರ್ಸತ್ ಹೇಳಿದರು.
ಇನ್ನೊಂದೆಡೆ ರಾಜಧಾನಿ ಭೇಟಿ ಬಳಿಕ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಕೂಡಾ ಮುಂಬೈಗೆ ಮರಳಿದರು. ಬಿಜೆಪಿ ರಾಜ್ಯ ಘಟಕ ಈಗ ಕೇಂದ್ರ ವೀಕ್ಷಕರ ನಿರೀಕ್ಷೆಯಲ್ಲಿದೆ. ಫಡಣವೀಸ್ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಇಬ್ಬರೂ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಅವರು, ಒಂದು ವೇಳೆ ಫಡಣವೀಸ್ ಅವರೇ ಮುಖ್ಯಮಂತ್ರಿಯಾದರೆ, ಅವರು ತಮಗಂಟಿರುವ ‘ದ್ವೇಷದ ರಾಜಕಾರಣ’ ಮಾಡುತ್ತಾರೆ ಎಂಬ ಅಭಿಪ್ರಾಯ ತೊಡದುಹಾಕಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
‘ರಾಜಕಾರಣ ಎಂದಿಗೂ ಸಿದ್ಧಾಂತಗಳ ಹೋರಾಟ. ಅದು ವೈಯಕ್ತಿಕವಾದುದಲ್ಲ’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಅಂದರೆ 132 ಸ್ಥಾನ ಗೆದ್ದಿದ್ದರೆ, ಅದರ ಮಿತ್ರ ಪಕ್ಷಗಳಾದ ಶಿವಸೇನೆ (ಶಿಂದೆ ಬಣ) 57 ಮತ್ತು ಎನ್‌ಸಿಪಿ (ಅಜಿತ್ ಬಣ) ಒಟ್ಟು 41 ಸ್ಥಾನವನ್ನು ಗೆದ್ದುಕೊಂಡಿದೆ.
ಶಿಂದೆಗೆ ಬೇಸರವಾಗಿಲ್ಲ ಆದರೆ ಆರೋಗ್ಯ ಹದಗೆಟ್ಟಿದೆ: ಶಿವಸೇನೆ ನಾಯಕ
ಮುಂಬೈ: ಉಸ್ತುವಾರಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಬೇಸರವಾಗಿದೆ.ಅದೇ ಕಾರಣಕ್ಕೆ ಅವರು ದಿಢೀರನೇ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ ಎಂಬ ಅಭಿಪ್ರಾಯವನ್ನು ಶಿವಸೇನೆ ನಿರಾಕರಿಸಿದೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಶಿವಸೇನೆ ನಾಯಕ ಉದಯ್ ಸಾಮಂತ್ ಅವರು ‘ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ತೆರಳಿದ್ದಾಗಲೇ ಅವರಿಗೆ ಆರೋಗ್ಯ ಸರಿ ಇರರಲಿಲ್ಲ. ಅದಕ್ಕೆ ಅವರು ಹುಟ್ಟೂರಿಗೆ ತೆರಳಿದ್ದಾರೆ‘ ಎಂದು ಸ್ಪಷ್ಟಪಡಿಸಿದರು.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಬಿಜೆಪಿ ವರಿಷ್ಠರ ತೀರ್ಮಾನವನ್ನು ಒಪ್ಪುತ್ತೇನೆ ಎಂದು ಶಿಂದೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಮುಂಬೈನಲ್ಲಿ ಶಿಂದೆ ಫಡಣವೀಸ್ ಮತ್ತು ಅಜಿತ್ ಪವಾರ್ ನಡುವೆ ನಡೆಯಬೇಕಿದ್ದ ಸಭೆ ಕುರಿತು ಗಮನಸೆಳೆದಾಗ ಭೌತಿಕವಾಗಿ ಸಭೆ ನಡೆಸಲು ಆಗದಿದ್ದರೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಡುತ್ತಾರೆ. ಆದರೆ ಶಿಂದೆ ಅವರು ಯಾವುದೇ ಕಾರಣಕ್ಕೂ ಬೇಸರಗೊಂಡಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.