ADVERTISEMENT

ಮನೀಶ್‌ ಸಿಸೋಡಿಯಾ ಅಮಾಯಕರು, ಕೊಳಕು ರಾಜಕೀಯದಿಂದ ಬಂಧನ: ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2023, 15:53 IST
Last Updated 26 ಫೆಬ್ರುವರಿ 2023, 15:53 IST
ಮನೀಶ್ ಸಿಸೋಡಿಯಾ ಮತ್ತು ಅರವಿಂದ ಕೇಜ್ರಿವಾಲ್
ಮನೀಶ್ ಸಿಸೋಡಿಯಾ ಮತ್ತು ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ‌ಬಂಧಿಸಿರುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

‘ಮನೀಶ್ ಸಿಸೋಡಿಯಾ ಅಮಾಯಕರು. ಕೊಳಕು ರಾಜಕೀಯದಿಂದ ಅವರ ಬಂಧನವಾಗಿದೆ. ಮನೀಶ್ ಬಂಧನದಿಂದ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಳವಣಿಗೆಗಳನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ’ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಇಂದು ಬೆಳಿಗ್ಗೆ ವಿಚಾರಣೆಗೆ ಒಳಪಡಿಸಿದ್ದರು. ಸತತ ಎಂಟು ಗಂಟೆಗಳ ವಿಚಾರಣೆ ಬಳಿಕ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ.

ADVERTISEMENT

ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರು ಅಬಕಾರಿ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ 17ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲ ಅವರ ಮನೆ ಮತ್ತು ಬ್ಯಾಂಕ್ ಲಾಕರ್‌ಗಳನ್ನೂ ಶೋಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.