ಉದ್ಯಮಿ ರಾಜಾ ರಘುವಂಶಿ ಕೊಲೆ ಆರೋಪಿ ಸೋನಮ್‌ಳನ್ನು ಕರೆದೊಯ್ಯುತ್ತಿರುವ ಪೊಲೀಸರು
ಕೃಪೆ: ಪಿಟಿಐ
ಶಿಲ್ಲಾಂಗ್: ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೋನಮ್ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಮೇಘಾಲಯ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸಾಕ್ಷ್ಯಾಧಾರಗಳು, ದಾಖಲೆಗಳನ್ನೊಳಗೊಂಡ 790 ಪುಟಗಳ ಆರೋಪಪಟ್ಟಿಯನ್ನು ಸೊಹ್ರಾ ಉಪ ವಿಭಾಗದ ಪ್ರಥಮದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ಪೊಲೀಸರು ಹಾಜರುಪಡಿಸಿದ್ದಾರೆ ಎಂದು ಈಸ್ಟ್ ಕಾಶಿ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿವ್ಕೆ ಸಿಯಮ್ ಹೇಳಿಕೆ ನೀಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಘುವಂಶಿ ಹಾಗೂ ಸೋನಮ್ ಇದೇ ವರ್ಷ ಮೇ 1ರಂದು ವಿವಾಹವಾಗಿದ್ದರು. ಮೇಘಾಲಯದ ಸೋಹ್ರಾಗೆ ಮಧುಚಂದ್ರಕ್ಕಾಗಿ ಮೇ 21ರಂದು ತೆರಳಿದ್ದರು. ದಂಪತಿ ನಾಪತ್ತೆಯಾಗಿದ್ದಾರೆ ಎಂಬುದು ಮೇ 26ರಂದು ವರದಿಯಾಗಿತ್ತು. ಇದರ ಬೆನ್ನಲ್ಲೇ, ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ವಿಶೇಷ ಕಾರ್ಯಾಚರಣೆ ತಂಡ, ಸ್ಥಳೀಯರ ಸಹಯೋಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ರಘುವಂಶಿ ಅವರ ಶವ ಶಿಲ್ಲಾಂಗ್ ಸಮೀಪದ ಜಲಪಾತದ ಕಮರಿಯಲ್ಲಿ ಜೂನ್ 2ರಂದು ಸಿಕ್ಕಿತ್ತು.
ಸೋಹ್ರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.
ರಘುವಂಶಿ ಪತ್ನಿ ಸೋನಮ್‌ಗೆ ರಾಜ್ ಕುಶ್ವಾಹ ಎಂಬಾತನೊಂದಿಗೆ ಸಂಬಂಧವಿತ್ತು. ಇದೇ ಕಾರಣಕ್ಕಾಗಿ ಅವರಿಬ್ಬರೂ ಸೇರಿ, ರಘುವಂಶಿ ಅವರನ್ನು ಮಧುಚಂದ್ರದ ವೇಳೆ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬುದು ತನಿಖಾಧಿಕಾರಿಗಳಿಗೆ ಗೊತ್ತಾಗಿತ್ತು.
ರಘುವಂಶಿಯನ್ನು ಕಮರಿಯಲ್ಲಿ ಸೋನಮ್ ಸಮ್ಮುಖದಲ್ಲೇ ಮೂವರು ಹಂತಕರಾದ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಆರಂಭವಾದ ಒಂದೇ ವಾರದಲ್ಲಿ ಸೋನಮ್ ಸೇರಿದಂತೆ ಐವರೂ ಆರೋಪಿಗಳನ್ನು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಪತ್ತೆ ಮಾಡಲಾಗಿತ್ತು.
ಐವರು ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103(1) (ಕೊಲೆ), ಸೆಕ್ಷನ್ 238 (ಎ) ಸಾಕ್ಷ್ಯನಾಶ, ಸೆಕ್ಷನ್ 61 (2) (ಅಪರಾಧಕ್ಕೆ ಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ನಂತರ, ಲೋಕೇಂದ್ರ ತೋಮರ್, ಬಲ್ಲಾ ಅಹಿರ್ವಾರ್ ಮತ್ತು ಶಿಲೋಮ್ ಜೇಮ್ಸ್ ಎಂಬವರನ್ನು ಬಂಧಿಸಲಾಗಿತ್ತು. ಇವರು, ಸಾಕ್ಷ್ಯ ನಾಶಕ್ಕೆ ನೆರವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.