ADVERTISEMENT

ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರ ಕುಟುಂಬದವರಿಗೆ ಮೋದಿ ಪ್ರಮಾಣವಚನಕ್ಕೆ ಆಹ್ವಾನ

ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಚುನಾವಣಾ ಗಲಭೆ

ಏಜೆನ್ಸೀಸ್
Published 29 ಮೇ 2019, 6:46 IST
Last Updated 29 ಮೇ 2019, 6:46 IST
   

ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದ ಪಕ್ಷದ ಕಾರ್ಯಕರ್ತರ ಕುಟುಂಬದವರನ್ನು ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಆಹ್ವಾನಿಸಿದೆ.

ಪಕ್ಷದ ಕಾರ್ಯಕರ್ತರ ಕುಟುಂಬದ ಸುಮಾರು 50 ಮಂದಿಯನ್ನು ವಿಶೇಷ ಆಹ್ವಾನಿತರನ್ನಾಗಿ ಪರಿಗಣಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇವರ ಕುಟುಂಬದವರುಕಳೆದ 6 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆ ಮತ್ತು ಇತ್ತೀಚಿನ ಲೋಕಸಭೆ ಚುನಾವಣೆ ಸಂದರ್ಭ ಸಂಭವಿಸಿದ ಹಿಂಸಾಚಾರಗಳಲ್ಲಿ ಮೃತಪಟ್ಟಿದ್ದರು.

ಪಶ್ಚಿಮ ಬಂಗಾಳದ ಮಿಡ್ನಾಪುರದ ಬಿಜೆಪಿ ಕಾರ್ಯಕರ್ತ, ದಿವಂಗತ ಮನುಹನ್ಸ್‌ದಾ ಅವರ ಪುತ್ರ ಕೂಡ ಸಮಾರಂಭಕ್ಕೆ ಆಹ್ವಾನಿತರಾಗಿದ್ದಾರೆ.‘ನನ್ನ ತಂದೆಯನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು. ನಾವೀಗ ದೆಹಲಿಗೆ ತೆರಳುತ್ತಿರುವ ಬಗ್ಗೆ ಸಂತಸವಿದೆ. ನಮ್ಮ ಪ್ರದೇಶದಲ್ಲಿ ಈಗ ಶಾಂತಿ ನೆಲೆಸಿದೆ’ ಎಂಬ ಹನ್ಸ್‌ದಾ ಪುತ್ರ ಅವರ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಹನ್ಸ್‌ದಾ ಅವರು ಚುನಾವಣಾ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಿಡ್ನಾಪುರ ಕ್ಷೇತ್ರದಲ್ಲಿ ಬಿಜೆಪಿಯ ದಿಲೀಪ್ ಘೋಷ್ ಅವರು ಟಿಎಂಸಿಯ ಮಾನಸ್ ಭುನಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆಯ ಎಲ್ಲ ಹಂತಗಳಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿತ್ತು. ರಾಜ್ಯದ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಜಯಗಳಿಸಿದೆ.

ನಾಳೆ ಪ್ರಮಾಣವಚನ:ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 7,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆ ಇದೆ.

‘ಆಹ್ವಾನ ಬಂದಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಿದ್ದೇನೆ. ಇದೊಂದು ಔಪಚಾರಿಕ ಕಾರ್ಯಕ್ರಮ. ಹಾಗಾಗಿ ಭಾಗವಹಿಸಲು ಯತ್ನಿಸುತ್ತೇನೆ’ ಎಂದು ಅವರು ಈಗಾಗಲೇ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.