ADVERTISEMENT

ಭತ್ತ ಖರೀದಿ ಶೇ 25ರಷ್ಟು ಹೆಚ್ಚಳ

ಮುಂಗಾರು ಹಂಗಾಮು ಅವಧಿಯಲ್ಲಿ ಎಂಎಸ್‌ಪಿ ಫಲಾನಭವಿಗಳು 56 ಲಕ್ಷ

ಪಿಟಿಐ
Published 28 ಡಿಸೆಂಬರ್ 2020, 19:32 IST
Last Updated 28 ಡಿಸೆಂಬರ್ 2020, 19:32 IST
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರೊಬ್ಬರು ಕಂಡಿದ್ದು ಹೀಗೆ –ಪಿಟಿಐ ಚಿತ್ರ
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರೊಬ್ಬರು ಕಂಡಿದ್ದು ಹೀಗೆ –ಪಿಟಿಐ ಚಿತ್ರ   

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್‌ಪಿ) 456 ಲಕ್ಷ ಟನ್ ಭತ್ತವನ್ನು ಖರೀದಿಸಿದೆ. ರೈತರಿಂದ ₹86 ಸಾವಿರ ಕೋಟಿ ಮೊತ್ತದ ಭತ್ತ ಖರೀದಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಖರೀದಿ ಪ್ರಮಾಣ ಶೇ 25ರಷ್ಟು ಹೆಚ್ಚಳವಾಗಿದೆ.

2020–21ನೇ ಸಾಲಿನಲ್ಲಿ ಎಂಎಸ್‌ಪಿ ಅಡಿಯಲ್ಲಿ ಸರ್ಕಾರದಿಂದ ದವಸಧಾನ್ಯ ಖರೀದಿ ಮುಂದುವರಿದಿದೆ ಎಂದು ಆಹಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಪಂಜಾಬ್, ಹರಿಯಾಣ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಬೆಂಬಲ ಬೆಲೆಯಲ್ಲಿ ಕರ್ನಾಟಕ, ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಿಸೆಂಬರ್‌ 27ರವರೆಗೆ ₹19 ಸಾವಿರ ಕೋಟಿ ಮೊತ್ತದ 67 ಲಕ್ಷ ಹತ್ತಿ ಅಂಡಿಗೆಗಳನ್ನು ಖರೀದಿ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರದ ವಿರುದ್ಧ ಅಸಮಾಧಾನ

ADVERTISEMENT

* ಬರುವ ಜನವರಿ ತಿಂಗಳೊಳಗೆ ರೈತರ ಬೇಡಿಕೆಗಳು ಈಡೇರದೇ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

* ‘ರೈತರು ಅನ್ನದಾತರು. ಕೃಷಿಯನ್ನು ಗೌರವಿಸದ ದೇಶ ಅಧಃಪತನ ಕಾಣಲಿದೆ’ ಎಂದು ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ, ನಟ ಕಮಲಹಾಸನ್ ಹೇಳಿದ್ದಾರೆ

* ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲು ಡಿ.31ರಂದು ವಿಧಾನಸಭೆ ವಿಶೇಷ ಅಧಿವೇಶನ ಕರೆಯುವ ಪ್ರಸ್ತಾವಕ್ಕೆ ಕೇರಳ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ

* ಕೃಷಿ ಕಾಯ್ದೆಗಳ ಬಗ್ಗೆ ಸುಳ್ಳು ನಿರೂಪಣೆಗಳು ರೈತರ ಹಿತಾಸಕ್ತಿಗೆ ಮತ್ತು ಆರ್ಥಿಕತೆಗೆ ಹಾನಿ ಉಂಟುಮಾಡುತ್ತಿವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ

* ಕೃಷಿ ಸಂಸ್ಥೆಗಳು ಮತ್ತು ತಜ್ಞರೊಂದಿಗೆ ಒಮ್ಮತ ಸಾಧಿಸುವವರೆಗೆ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದು ಸೂಕ್ತ ಎಂದು ಹರಿಯಾಣ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲ ಅವರು ಪ್ರಧಾನಿಗೆ ಸೋಮವಾರ ಪತ್ರ ಬರೆದಿದ್ದಾರೆ

* ರೈತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಕಾಸ್ ಯಾದವ್ ಎಂಬುವರು ತಮ್ಮ ದೇಹದ ಮೇಲೆ ತ್ರಿವರ್ಣಧ್ವಜದ ಬಣ್ಣ ಬಿಡಿಸಿಕೊಂಡು ಗಮನ ಸೆಳೆದರು.

*
ಕೃಷಿ ಕಾನೂನುಗಳ ಬಗ್ಗೆ ರೈತರ ಮನಸ್ಸಿನಲ್ಲಿ ಸುಳ್ಳಿನ ಗೋಡೆಗಳನ್ನು ಯೋಜಿತ ರೀತಿಯಲ್ಲಿ ಕಟ್ಟಲಾಗಿದೆ. ಇದು ಹೆಚ್ಚು ಕಾಲ ಉಳಿಯದು.
-ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಸಚಿವ

*
ಸ್ಪಷ್ಟ ಉದ್ದೇಶ ಮತ್ತು ಮುಕ್ತ ಮನಸ್ಸಿನಿಂದ ಎಲ್ಲಾ ಸಂಬಂಧಿತ ವಿಷಯಗಳ ಬಗ್ಗೆ ತಾರ್ಕಿಕ ಪರಿಹಾರವನ್ನು ಕಂಡುಹಿಡಿಯಲು ಸರ್ಕಾರ ಬದ್ಧವಾಗಿದೆ.
-ಸಂಜಯ್ ಅಗರ್‌ವಾಲ್, ಕೇಂದ್ರ ಕೃಷಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.