ADVERTISEMENT

ಮ್ಯಾನ್ಮಾರ್, ಬಾಂಗ್ಲಾದೇಶ ನಿರಾಶ್ರಿತರ ಬೆರಳಚ್ಚು ಪಡೆಯುವುದಿಲ್ಲ: ಮಿಜೋರಾಂ CM

ಪಿಟಿಐ
Published 29 ಫೆಬ್ರುವರಿ 2024, 10:29 IST
Last Updated 29 ಫೆಬ್ರುವರಿ 2024, 10:29 IST
<div class="paragraphs"><p>ಮುಖ್ಯಮಂತ್ರಿ ಲಾಲ್ಡುಹೊಮಾ</p></div>

ಮುಖ್ಯಮಂತ್ರಿ ಲಾಲ್ಡುಹೊಮಾ

   

ಐಜ್ವಾಲ್: ‘ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ನಿರಾಶ್ರಿತರಿಂದ ಬೆರಳಚ್ಚು ಮಾದರಿಯನ್ನು ಮಿಜೋರಾಂ ಸರ್ಕಾರ ಸಂಗ್ರಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಲಾಲ್ಡುಹೊಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.

‘ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ನಿರಾಶ್ರಿತರು ಹಾಗೂ ಆಂತರಿಕವಾಗಿ ಸ್ಥಳಾಂತರಗೊಂಡ ಮಣಿಪುರದ ಜನರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಈ ನಿರಾಶ್ರಿತರ ಬೆರಳಚ್ಚು ಮಾದರಿ ಪಡೆಯುವಂತೆ ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆಗ ಅಧಿಕಾರದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರದ ಆದೇಶ ಪಾಲನೆಗೆ ಮುಂದಾಗಿತ್ತು. ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ನೋಡಲ್ ಅಧಿಕಾರಿಗಳ ನೇಮಕವೂ ಆಗಿತ್ತು’ ಎಂದು ವಿಧಾನಸಭೆಗೆ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

ADVERTISEMENT

‘ಆದರೆ ಸೆಪ್ಟೆಂಬರ್‌ನಲ್ಲಿ ಕೈಗೊಳ್ಳಲಾದ ನಿರ್ಣಯದಂತೆ, ವಿಧಾನಸಭಾ ಚುನಾವಣೆ ನಡೆಯುವ ಕಾರಣ ನಿರಾಶ್ರಿತರ ಬೆರಳಚ್ಚು ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದು ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಮ್ಮ ಸರ್ಕಾರವೂ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ನಿರಾಶ್ರಿತರ ಬೆರಳಚ್ಚು ಸಂಗ್ರಹಿಸದಿರಲು ನಿರ್ಧರಿಸಿದೆ. ಈ ಕುರಿತಂತೆ ಕಳೆದ ಜನವರಿಯಲ್ಲಿ ಕೇಂದ್ರ ಗೃಹ ಸಚಿವರೊಂದಿಗೆ ನಡೆದ ಸಭೆಯಲ್ಲಿ ಕೆಲ ವಿಷಯಗಳ ಕುರಿತು ಚರ್ಚಿಸಲಾಯಿತು. ಪ್ರಮುಖವಾಗಿ, ಕೇಂದ್ರವು ಮಾಹಿತಿ ಸಂಗ್ರಹಿಸಲು ತನ್ನ ಹಳೆಯ ಪೋರ್ಟಲ್‌ ಅನ್ನೇ ಬಳಸುತ್ತಿದ್ದು, ಇದರನ್ವಯ ಬೆರಳಚ್ಚು ಮಾಹಿತಿ ಸಂಗ್ರಹಿಸಿದ ನಂತರ ಅಕ್ರಮ ವಲಸಿಗರ ಗಡಿಪಾರು ಮಾಡಬೇಕು ಎಂಬ ಅರ್ಥವಿದೆ’ ಎಂದು ಎಂಎನ್‌ಎಫ್‌ ಸದಸ್ಯ ರಾಬ್ಟರ್ಟ್ ರೊಮಾವಿಯಾ ರೊಯ್ಟೆ ಅವರ ಪ್ರಶ್ನೆಗೆ ಲಾಲ್ಡುಹೊಮಾ ಉತ್ತರಿಸಿದರು.

‘ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶ ರಾಷ್ಟ್ರದವರು ರಾಜ್ಯದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದಾರೆ. ಬೆರಳಚ್ಚು ಸಂಗ್ರಹಿಸುವ ಕೇಂದ್ರದ ನಿರ್ಧಾರದಿಂದ ಅವರು ಗಡಿಪಾರಾಗುವ ಭೀತಿಯಲ್ಲಿದ್ದಾರೆ. ನೆರೆಯ ರಾಷ್ಟ್ರಗಳಲ್ಲಿ ಶಾಂತಿ ನೆಲೆಸುವವರೆಗೂ ಯಾವುದೇ ನಿರಾಶ್ರಿತರನ್ನು ಗಡಿಪಾರು ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಆಶ್ವಾಸನೆ ನೀಡಿದ್ದಾರೆ. ಸದ್ಯ ಈ ನಿರಾಶ್ರಿತರಿಗೆ ರಾಜ್ಯ ಸರ್ಕಾರ ತನ್ನದೇ ಖರ್ಚಿನಲ್ಲಿ ನೆರವು ನೀಡುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಎಂಎನ್‌ಎಫ್‌ ಆಡಳಿತವಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ನಿರಾಶ್ರಿತರಿಗಾಗಿ ನಿರಂತರವಾಗಿ ನೆರವು ನೀಡಿದ್ದು, ₹3 ಕೋಟಿ ಅನುದಾನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಮಾಹಿತಿ ಅನ್ವಯ ಮ್ಯಾನ್ಮಾರ್‌ನಿಂದ ಒಟ್ಟು 32,221 ಜನ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಚಂಫೈ ಜಿಲ್ಲೆಯೊಂದರಲ್ಲೇ ಮ್ಯಾನ್ಮಾರ್‌ನ 12,484 ಜನ ಆಶ್ರಯ ಪಡೆದಿದ್ದಾರೆ. ಕನಿಷ್ಠ 1,167 ಬಾಂಗ್ಲಾದೇಶ ನಾಗರಿಕರು ಮಿಜೋರಾಂನ ಲಾಂಗ್ಟಲೈ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಮಣಿಪುರದಿಂದ ಸ್ಥಳಾಂತರಗೊಂಡ ಸುಮಾರು 9 ಸಾವಿರ ಜನರು ಮಿಜೋರಾಂನಲ್ಲಿ ನಿರಾಶ್ರಿತರಾಗಿ ನೆಲೆಸಿದ್ದಾರೆ’ ಎಂದು ಸದನಕ್ಕೆ ಹೇಳಿದ್ದಾರೆ.

ಮಿಲಿಟರಿ ಮಂಡಳಿಯು ದೇಶದ ಆಡಳಿತವನ್ನು ತನ್ನ ಕೈವಶ ಮಾಡಿಕೊಂಡ (2021ರ ಫೆಬ್ರುವರಿ) ಬಳಿಕ ಮ್ಯಾನ್ಮಾರ್‌ನ ನಿರಾಶ್ರಿತರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶದ ಜಿತ್ತಗಾಂಗ್‌ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲಿನ ಸೇನೆ ಹಾಗೂ ಜನಾಂಗೀಯ ದಂಗೆಕೋರರ ನಡುವಿನ ಸಂಘರ್ಷ ನಡೆದಾಗ ಆ ಭಾಗದ ಬಹಳಷ್ಟು ಜನ ಮಿಜೋರಾಂಗೆ ವಲಸೆ ಬಂದಿದ್ದರು. ಕಳೆದ ಮೇ ನಂತರ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದ ನಂತರ ಕುಕಿ–ಝೋ ಜನರು ಮಿಜೋರಾಂನಲ್ಲಿ ಆಶ್ರಯ ಪಡೆದರು.

ಮ್ಯಾನ್ಮಾರ್‌ನ ಚಿನ್ ಜನರು, ಬಾಂಗ್ಲಾದೇಶದ ಬಾಮ್‌ ಸಮುದಾಯ ಹಾಗೂ ಮಣಿಪುರದ ಕುಕಿ–ಝೋ ಜನರು ಮಿಜೋಗಳೊಂದಿಗೆ ಜನಾಂಗೀಯ ಸಂಬಂಧಗಳನ್ನು ಈಗ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.