ADVERTISEMENT

ಛತಿ ಮೈಯಾಗೆ ಅವಮಾನಿಸಿದವರನ್ನು ಬಿಹಾರದ ಜನತೆ ಕ್ಷಮಿಸುವುದಿಲ್ಲ: ಮೋದಿ ವಾಗ್ದಾಳಿ

ಓಲೈಕೆ ರಾಜಕಾರಣ: ‘ಕೈ’,ಆರ್‌ಜೆಡಿ ನಾಯಕರ ವಿರುದ್ಧ ಮೋದಿ ಆರೋಪ

ಪಿಟಿಐ
Published 30 ಅಕ್ಟೋಬರ್ 2025, 14:18 IST
Last Updated 30 ಅಕ್ಟೋಬರ್ 2025, 14:18 IST
<div class="paragraphs"><p>ಬಿಹಾರ ವಿಧಾನಸಭೆ ಚುನಾವಣೆ ಪ್ರಯುಕ್ತ ಛಪ್ರಾ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಮಾತುಕತೆಯಲ್ಲಿ ತೊಡಗಿದ್ದರು&nbsp; </p></div>

ಬಿಹಾರ ವಿಧಾನಸಭೆ ಚುನಾವಣೆ ಪ್ರಯುಕ್ತ ಛಪ್ರಾ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಮಾತುಕತೆಯಲ್ಲಿ ತೊಡಗಿದ್ದರು 

   

ಪಿಟಿಐ ಚಿತ್ರ

ಛಪ್ರಾ/ಮುಜಫ್ಫರಪು(ಬಿಹಾರ): ‘ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ನಾಯಕರು ಬಿಹಾರದಲ್ಲಿ ‘ಛತಿ ಮೈಯಾ’ಗೆ (ಛತಿ ದೇವಿ) ಅವಮಾನಿಸುತ್ತಿದ್ದಾರೆ. ರಾಜ್ಯದ ಜನತೆ ಇವರನ್ನು ಕ್ಷಮಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.

ADVERTISEMENT

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಎರಡು ಪಕ್ಷಗಳು ವಿರೋಧಿಸಿದ್ದವು. ಈಗ, ಓಲೈಕೆ ಮತ್ತು ಮತಬ್ಯಾಂಕ್‌ ರಾಜಕಾರಣಕ್ಕಾಗಿ ನುಸುಳುಕೋರರನ್ನು ರಕ್ಷಿಸುತ್ತಿದ್ದಾರೆ’ ಎಂದೂ ಅವರು ವಾಗ್ದಾಳಿ ನಡೆಸಿದರು.

ಛಪ್ರಾ ಮತ್ತು ಮುಜಫ್ಫರಪುರ ಪಟ್ಟಣಗಳಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು, ‘ಮತಗಳಿಗಾಗಿ ಈ ಜನರು (ಕಾಂಗ್ರೆಸ್‌ ಹಾಗೂ ಆರ್‌ಜೆಡಿ ನಾಯಕರು) ಎಂತಹ ಕೀಳು ಮಟ್ಟಕ್ಕೂ ಹೋಗುತ್ತಾರೆ. ಶತಮಾನಗಳಿಂದಲೂ ಬಿಹಾರದಲ್ಲಿ ನಡೆಯುತ್ತಿರುವ ಛತ್‌ ಪೂಜೆಗೆ ಅವಮಾನ ಮಾಡುತ್ತಿದ್ದಾರೆ’ ಎಂದರು.

ಛತ್ ಪೂಜೆ ಅಂಗವಾಗಿ ಪ್ರಧಾನಿ ಮೋದಿ ಯಮುನಾ ನದಿಯಲ್ಲಿ ಸ್ನಾನ ಮಾಡಲು ಉದ್ದೇಶಿಸಿದ್ದರು. ನದಿಯು ಕಲುಷಿತಗೊಂಡಿದ್ದರಿಂದ ಮೋದಿ ಅವರಿಗಾಗಿ ಶುದ್ಧನೀರಿನ ‌ಕೊಳವೊಂದನ್ನು ನಿರ್ಮಿಸಲಾಗಿತ್ತು. ಇದು ಬಹಿರಂಗಗೊಂಡ ಬಳಿಕ, ಮೋದಿ ಅವರು ನದಿಯಲ್ಲಿ ಸ್ನಾನ ಮಾಡುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ವಿಚಾರ ಮುಂದಿಟ್ಟುಕೊಂಡು ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದರು.

‘ಯಮುನಾ ನದಿಯಲ್ಲಿ ಸ್ನಾನ ಮಾಡಲು ಮೋದಿ ಯೋಜಿಸಿದ್ದರು. ನದಿ ಕಲುಷಿತವಾಗಿದ್ದರಿಂದ ತಮ್ಮ ಯೋಜನೆ ಕೈಬಿಟ್ಟರು. ಇದೆಲ್ಲಾ ನಾಟಕ. ಮತಗಳಿಗಾಗಿ ಮೋದಿ ಏನೆಲ್ಲಾ ಮಾಡುತ್ತಾರೆ’ ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಯಾಗಿ, ಮೋದಿ ಅವರು ವಿಪಕ್ಷಗಳ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ಆರ್‌ಜೆಡಿ, ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಓಲೈಕೆ ಮತ್ತು ಮತಬ್ಯಾಂಕ್‌ ರಾಜಕಾರಣ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕಾಗಿಯೇ ಅವರು ನುಸುಳುಕೋರರನ್ನು ರಕ್ಷಿಸುತ್ತಿದ್ದಾರೆ’ ಎನ್ನುವ ಮೂಲಕ, ವಿಪಕ್ಷಗಳು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ವಿರೋಧಿಸುತ್ತಿರುವುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದರು.

ಬಿಹಾರ ವಿಧಾನಸಭೆ ಚುನಾವಣೆ ಪ್ರಯುಕ್ತ ಮುಜಫ್ಫರಪುರ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಬಿಜೆಪಿ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಪ್ರದರ್ಶಿಸಿದರು 

‘ಛತ್‌ ಪೂಜೆಗೆ ಯುನೆಸ್ಕೊ ಮಾನ್ಯತೆಗೆ ಪ್ರಯತ್ನ’

‘ಛತ್‌ ಪೂಜೆಯು ಶ್ರದ್ಧೆ ಭಕ್ತಿಯ ಹಬ್ಬ ಮಾತ್ರವಲ್ಲ. ಇದು ಸಮಾನತೆ ಸಾರುವ ಉತ್ಸವ. ಇದೇ ಕಾರಣಕ್ಕೆ ಛತ್‌ ಪೂಜೆಗೆ ಯುನೆಸ್ಕೊ ಪಾರಂಪರಿಕ ಮಾನ್ಯತೆ ಪಡೆಯುವುದಕ್ಕೆ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಮೋದಿ ಹೇಳಿದರು. ‘ಪ್ರವಾಸದ ಸಂದರ್ಭದಲ್ಲಿ ನಾನು ಛತ್‌ ಹಬ್ಬದ ಹಾಡುಗಳನ್ನು ಕೇಳುತ್ತೇನೆ. ನಾಗಾಲ್ಯಾಂಡ್‌ನ ಬಾಲಕಿಯೊಬ್ಬರು ಛತ್‌ ಹಾಡು ಹಾಡಿದ್ದನ್ನು ಕೇಳಿ ಖುಷಿಯಾಯಿತು. ಇಂತಹ ಹಬ್ಬಕ್ಕೆ ಸಿಗಬೇಕಾದ ಗೌರವ ಸಿಗುವಂತೆ ಮಾಡಲು ನಿಮ್ಮ ಈ ಪುತ್ರ ಶ್ರಮಿಸುತ್ತಿದ್ದಾನೆ. ಆದರೆ ಕಾಂಗ್ರೆಸ್‌–ಆರ್‌ಜೆಡಿ ನಾಯಕರು  ಇದನ್ನು ನಾಟಕ ಎನ್ನುವ ಮೂಲಕ ಛತ್ ಹಬ್ಬ ಕುರಿತು ಅಪಹಾಸ್ಯ ಮಾಡುತ್ತಿದ್ದಾರೆ’ ಎಂದು ಯಾವುದೇ ಪಕ್ಷದ ನಾಯಕರ ಹೆಸರು ಉಲ್ಲೇಖಿಸದೇ ಟೀಕಿಸಿದರು.

ವಿಪಕ್ಷಗಳ ನಾಯಕರಿಗೆ ನಮ್ಮ ಸಾಂಸ್ಕೃತಿಕ ಪರಂಪರೆ ಕುರಿತು ಸಮಸ್ಯೆ ಇದ್ದಂತಿದೆ. ಅವರು ವಿದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ 500 ವರ್ಷಗಳ ಹೋರಾಟದ ಬಳಿಕ ನಿರ್ಮಿಸಿರುವ ರಾಮ ಮಂದಿರಕ್ಕೆ ಹೋಗುವುದಿಲ್ಲ
ನರೇಂದ್ರ ಮೋದಿ, ಪ್ರಧಾನಿ

ಮೋದಿ ಭಾಷಣದ ಪ್ರಮುಖ ಅಂಶಗಳು

  • ಈ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಹೀನಾಯವಾಗಿ ಸೋಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಇದೇ ಕಾರಣಕ್ಕೆ ಮೈತ್ರಿಕೂಟವು ವಾಸ್ತವವಲ್ಲದ ಭರವಸೆಗಳನ್ನು ನೀಡುತ್ತಿದೆ

  • ಆರ್‌ಜೆಡಿ ರ‍್ಯಾಲಿಗಳಲ್ಲಿ ಡ್ಯಾಗರ್ ದುನಾಲಿ (ಡಬಲ್ ಬ್ಯಾರನ್ ಗನ್) ಪುತ್ರಿಯರ ಹಾಗೂ ಸಹೋದರಿಯರ ಅಪಹರಣ ಕುರಿತ ಹಾಡುಗಳನ್ನು ಬಿತ್ತರಿಸಲಾಗುತ್ತಿದೆ

  • ಆರ್‌ಜೆಡಿ ಅಧಿಕಾರದ ಅವಧಿಯಲ್ಲಿ ಬಿಹಾರದಲ್ಲಿ 35 ಸಾವಿರದಿಂದ 40 ಸಾವಿರ ಅಪಹರಣಗಳು ನಡೆದಿವೆ

  • ಆರ್‌ಜೆಡಿ ಆಡಳಿತವಿದ್ದಾಗ ಮುಖ್ಯಮಂತ್ರಿಗಳ ಕಚೇರಿಯು ಮಾಫಿಯಾಗಳ ಪಾಲಿಗೆ ಸ್ವರ್ಗವಾಗಿತ್ತು