ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿ ತೀಕ್ಷ್ಣ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತವು ತನ್ನ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇಕಡ 50ಕ್ಕೆ ಹೆಚ್ಚಿಸಿರುವುದಾಗಿ ಟ್ರಂಪ್ ಘೋಷಿಸಿದ ಮರುದಿನ ಪ್ರಧಾನಿ ಅವರ ಹೇಳಿಕೆ ಬಂದಿದೆ. ಸುಂಕ ಹೆಚ್ಚಿಸುವ ಆದೇಶಕ್ಕೆ ಟ್ರಂಪ್ ಬುಧವಾರ ಸಹಿ ಹಾಕಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ ದಿವಂಗತ ಎಂ.ಎಸ್. ಸ್ವಾಮಿನಾಥನ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ‘ನಮಗೆ ರೈತರ ಹಿತಾಸಕ್ತಿ ಇತರ ಎಲ್ಲಕ್ಕಿಂತಲೂ ಮುಖ್ಯ’ ಎಂದು ಪ್ರತಿಪಾದಿಸಿದರು.
ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿ ಕಾಪಾಡಲು ದೇಶವು ಯಾವುದೇ ಬೆಲೆ ತೆರಲು ಸಿದ್ಧ ಎಂದು ಒತ್ತಿ ಹೇಳಿದರು.
ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದ್ದು, ಅದು ಇನ್ನೂ ಅಂತಿಮಗೊಂಡಿಲ್ಲ. ಕೃಷಿ ಮತ್ತು ಹೈನು ಉತ್ಪನ್ನಗಳ ವಲಯವನ್ನು ಅಮೆರಿಕದ ಉತ್ಪನ್ನಗಳಿಗೆ ಮುಕ್ತಗೊಳಿಸಲು ಭಾರತವು ಒಪ್ಪುತ್ತಿಲ್ಲ. ಧಾನ್ಯ, ಸೋಯಾಬೀನ್, ಸೇಬು, ಬಾದಾಮಿ ಮತ್ತು ಎಥೆನಾಲ್‌ನಂತಹ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲು ಅಮೆರಿಕ ಬಯಸುತ್ತಿದೆ. ಆದರೆ, ಇವು ರೈತರ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಈ ಬೇಡಿಕೆಗಳನ್ನು ಭಾರತ ವಿರೋಧಿಸುತ್ತಿದೆ.
ನಾಣ್ಯ ಬಿಡುಗಡೆ: ಪ್ರಧಾನಿ ಅವರು ಎಂ.ಎಸ್. ಸ್ವಾಮಿನಾಥನ್ ಗೌರವಾರ್ಥವಾಗಿ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿದರು.
ಭಾರತದ ಕೃಷಿಗೆ ಸಂಬಂಧಿಸಿದಂತೆ ತಮ್ಮ ದೂರದೃಷ್ಟಿಯ ಯೋಜನೆಗಳನ್ನು ವಿವರಿಸಿದ ಅವರು, ಪೌಷ್ಟಿಕಾಂಶ ಭದ್ರತೆ, ಬೆಳೆ ವೈವಿಧ್ಯ ಮತ್ತು ತಂತ್ರಜ್ಞಾನದ ಅಳವಡಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
‘ನಮ್ಮ ಸರ್ಕಾರ ಯಾವಾಗಲೂ ರೈತರ ಬಲವನ್ನು ರಾಷ್ಟ್ರದ ಪ್ರಗತಿಯ ಅಡಿಪಾಯವೆಂದು ಪರಿಗಣಿಸಿದೆ. ಈಚೆಗಿನ ವರ್ಷಗಳಲ್ಲಿ ರೂಪಿಸಲಾದ ನೀತಿಗಳು ರೈತರಿಗೆ ನೆರವು ನೀಡಿದ್ದಷ್ಟೇ ಅಲ್ಲದೆ, ಅವರಲ್ಲಿ ಆತ್ಮವಿಶ್ವಾಸವನ್ನೂ ತುಂಬಿವೆ’ ಎಂದರು.
ರೈತರ ಹಿತಾಸಕ್ತಿ ಕಾಪಾಡಲು ವೈಯಕ್ತಿಕವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ನಾನು ಅದಕ್ಕೆ ಸಿದ್ಧನಿದ್ದೇನೆ.– ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.