
ಪ್ರಧಾನಿ ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಎನ್‌ಡಿಎ ವಿವಿಧ ಚುನಾವಣೆಗಳಲ್ಲಿ ನಿರಂತರ ಜಯ ಸಾಧಿಸುತ್ತಿರುವುದಕ್ಕೆ ಜನಪರ ನೀತಿಗಳು ಹಾಗೂ ಪರಿಶ್ರಮವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.
ಎನ್‌ಡಿಎ ನಾಯಕರ ಸಭೆಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ವಿವಿಧ ಗೆಲುವುಗಳಿಂದ ಆತ್ಮತೃಪ್ತರಾಗದೇ ಉತ್ತಮ ಕಾರ್ಯ ಮುಂದುವರಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ತಳಮಟ್ಟದಲ್ಲಿ ನಿಂತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದಾಗ ಚುನಾವಣೆಗಳನ್ನು ಗೆಲ್ಲಲು ಸಾಧ್ಯ ಎಂಬ ಸಂದೇಶವನ್ನು ಪ್ರಧಾನಿ ಮೋದಿ ಎಲ್ಲರಿಗೂ ರವಾನಿಸಿದರು ಎಂದು ಸಚಿವ ಕಿರಣ್ ರಿಜಿಜು ತಿಳಿಸಿದರು.
ಎನ್‌ಡಿಎ ಸಂಸದೀಯ ಪಕ್ಷದ ಸಭೆ ಬಳಿಕ ಕಿರಣ್ ರಿಜಿಜು ಸುದ್ದಿಗಾರರ ಜೊತೆ ಮಾತನಾಡಿದರು.
39 ದೇಶಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಯಶಸ್ವಿಯಾಗಿ ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ಎನ್‌ಡಿಎ ನಾಯಕರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಭಾರತೀಯ ವಸ್ತುಗಳ ಮೇಲಿನ ಸುಂಕವನ್ನು ಶೇ 18ಕ್ಕೆ ಇಳಿಸಿರುವುದು ದೇಶದಾದ್ಯಂತ ಉತ್ಸಾಹ ಮೂಡಿಸಿದ್ದು, ಇದು ಐತಿಹಾಸಿಕ ಸಾಧನೆ ಎಂದು ರಿಜಿಜು ಹೇಳಿದರು.
ವಾಣಿಜ್ಯ ಒಪ್ಪಂದ ಅಥವಾ ಬಜೆಟ್ ಆಗಲಿ, ಸರ್ಕಾರ ಯಾವಾಗಲೂ ಭಾರತದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತದೆ. ಭಾರತ–ಅಮೆರಿಕ ಹಾಗೂ ಭಾರತ–ಯುರೋಪ್ ನಡುವಿನ ವಾಣಿಜ್ಯ ಒಪ್ಪಂದಗಳಿಗೆ ಪ್ರಧಾನಿಯ ದೃಢಸಂಕಲ್ಪವೇ ಕಾರಣವಾಗಿದೆ. ಈ ಒಪ್ಪಂದಗಳು ಸಣ್ಣ ವ್ಯಾಪಾರಿಗಳಿಗೆ ಲಾಭ ತರಲಿವೆ ಎಂದು ಶಿವಸೇನಾ ಸಂಸದ ಮಿಲಿಂದ್ ದಿಯೋರಾ ಹೇಳಿದರು
ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಸ್ವಾಗತಿಸಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆ ನಾಯಕ ಶ್ರಿಕಾಂತ್ ಶಿಂಧೆ, ರಾಷ್ಟ್ರೀಯ ಲೋಕ ಮೋರ್ಚಾ ನಾಯಕ ಉಪೇಂದ್ರ ಕುಶ್ವಾಹ ಸೇರಿದಂತೆ ಬಿಜೆಪಿ, ಟಿಡಿಪಿ, ಜೆಡಿ(ಯು), ಎಲ್‌ಜೆಪಿ(ಆರ್), ಶಿವಸೇನೆ, ಜೆಡಿಎಸ್ ಸೇರಿದಂತೆ ಎನ್‌ಡಿಎ ಅಂಗಪಕ್ಷಗಳ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.