ಮುಂಬೈಯಲ್ಲಿ ಧಾರಾಕಾರ ಮಳೆ
–ಪಿಟಿಐ ಚಿತ್ರ
ಮುಂಬೈ: ಮುಂಬೈ ನಗರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 106 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಇಂದು ಬೆಳಿಗ್ಗೆ ಉಪನಗರ ರೈಲುಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ, ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ (ಬೆಸ್ಟ್) ಬಸ್‌ಗಳು ಮತ್ತು ಮೆಟ್ರೊ ಸೇವೆಗಳು ಎಂದಿನಂತೆ ಮುಂದುವರಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೃಹತ್ ಮಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಪ್ರಕಾರ, ‘ನರಿಮನ್ ಪಾಯಿಂಟ್‌ನಲ್ಲಿ ಮೇ 25ರಂದು ರಾತ್ರಿ 10ರಿಂದ ಮೇ 26ರಂದು ಬೆಳಿಗ್ಗೆ 11ರವರೆಗೆ 252 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ. ನಂತರ ಬಿಎಂಸಿ ಪ್ರಧಾನ ಕಚೇರಿ ಬಳಿ (216 ಮಿ.ಮೀ) ಮತ್ತು ಕೊಲಾಬಾ ಪಂಪಿಂಗ್ ಸ್ಟೇಷನ್‌ನಲ್ಲಿ (207 ಮಿ.ಮೀ) ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ ಸರಾಸರಿ 106 ಮಿ.ಮೀ ಮಳೆಯಾಗಿದ್ದರೆ, ಪಶ್ಚಿಮ ಉಪನಗರಗಳಲ್ಲಿ 72 ಮಿ.ಮೀ ಮತ್ತು ಪೂರ್ವ ಉಪನಗರಗಳಲ್ಲಿ 63 ಮಿ.ಮೀ ಮಳೆಯಾಗಿದೆ ಎಂದು ಬಿಎಂಸಿ ಮಾಹಿತಿ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಉಪನಗರಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವೆಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮುಂಬೈಗೆ ಸೋಮವಾರ ನೈರುತ್ಯ ಮುಂಗಾರು ಪ್ರವೇಶ ಮಾಡಿದೆ. ಇದರ ಪರಿಣಾಮ ಮುಂಬೈನ ಹಲವೆಡೆ ಭಾರಿ ಮಳೆಯಾಗುತ್ತಿದೆ. ಏತನ್ಮಧ್ಯೆ, ಮುಂಬೈಗೆ ಅವಧಿಗೂ ಮುನ್ನವೇ ಮುಂಗಾರು ಪ್ರವೇಶ ಮಾಡಿದ್ದು 72 ವರ್ಷಗಳ ನಂತರ ಇದೇ ಮೊದಲು. ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.