ಮುಂಬೈ ಮಳೆ, ಇಂಡಿಗೊ ವಿಮಾನ
(ಪಿಟಿಐ ಚಿತ್ರ)
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.
ಕಳೆದ 24 ಗಂಟೆಗಳಲ್ಲಿ ಮುಂಬೈಯ ಹಲವಾರು ಪ್ರದೇಶಗಳಲ್ಲಿ 200 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದೆ. ಪೂರ್ವ ಉಪನಗರದ ಮಿಕ್ರೋಲಿಯಲ್ಲಿ ಅತಿ ಹೆಚ್ಚು 255.5 ಮಿ.ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು (ಮಂಗಳವಾರ) ತಿಳಿಸಿದೆ.
ಹಾಗೆಯೇ ಪಶ್ಚಿಮ ಉಪನಗರದಲ್ಲಿ 238.2 ಮಿ.ಮೀ., ಬೈಖಲಾದಲ್ಲಿ 241 ಮಿ.ಮೀ., ಜುಹು ಪ್ರದೇಶದಲ್ಲಿ 221.5 ಮಿ.ಮೀ. ಮತ್ತು ಬಾಂದ್ರಾದಲ್ಲಿ 211 ಮಿ.ಮೀ. ಮಳೆಯಾಗಿದೆ.
ಮುಂಬೈಯಲ್ಲಿ ಭಾರಿ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ಪ್ರಯಾಣಿಕರಿಗೆ ಇಂಡಿಗೊ ಸೂಚನೆಗಳನ್ನು ನೀಡಿದೆ.
ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ವಿಮಾನಗಳು ನಿಧಾನವಾಗಿ ಸಂಚರಿಸುತ್ತಿವೆ. ಇದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ವಿಮಾನಗಳ ಆಗಮನ ಹಾಗೂ ನಿರ್ಗಮನ ವಿಳಂಬವಾಗುತ್ತಿವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ತಿಳಿಸಿದೆ.
ವಿಮಾನ ಸಂಚಾರದ ಸ್ಥಿತಿಗತಿಯ ಗುರಿತು ಆ್ಯಪ್ ಹಾಗೂ ವೆಬ್‌ಸೈಟ್ ಮೂಲಕ ಗಮನಹರಿಸುವಂತೆಯೂ ಪ್ರಯಾಣಿಕರನ್ನು ಕೋರಲಾಗಿದೆ.
ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ, ಆರಾಮಕ್ಕೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಇಂದು ಸರ್ಕಾರಿ ಕಚೇರಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಮುಂಬೈ ಮಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.